ಜಿಟಿಡಿ
ಮೈಸೂರು: ‘ನಾನು ಅಥವಾ ನನ್ನ ಮಗನಿಗೆ ಜೈಲಿಗೆ ಹೋಗುವಂಥ ಸ್ಥಿತಿಯೇನೂ ಬಂದಿಲ್ಲ. ಅಂತಹ ಕೆಲಸವನ್ನೇನೂ ನಾವು ಮಾಡಿಲ್ಲ. ನಮ್ಮ ವಿರುದ್ಧ ಯಾವುದಾದರೂ ಪ್ರಕರಣವಿದ್ದರೆ ತಾನೇ ಬಂಧಿಸುವುದು?’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
‘ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಿಟಿಡಿ ಹಾಗೂ ಅವರ ಪುತ್ರನನ್ನು ಬಂಧಿಸಲು ಸಿದ್ಧತೆಯಾಗಿತ್ತು. ಅದನ್ನು ಎಚ್.ಡಿ.ಕುಮಾರಸ್ವಾಮಿ ತಪ್ಪಿಸಿದ್ದರು. ಇಲ್ಲದಿದ್ದರೆ ಜಿಟಿಡಿ ಮಗನ ಜೊತೆ ಜೈಲಿನಲ್ಲಿರಬೇಕಿತ್ತು’ ಎಂಬ ಶಾಸಕ ಎಚ್.ಡಿ. ರೇವಣ್ಣ ಹೇಳಿಕೆಗೆ ಇಲ್ಲಿ ಗುರುವಾರ ತಿರುಗೇಟು ನೀಡಿದರು.
‘ನನ್ನ ವಿರುದ್ಧ ಆ ಹೇಳಿಕೆ ನೀಡಿದ್ದೇಕೆ ಎಂದು ರೇವಣ್ಣ ಅವರನ್ನು ಬೆಳಗಾವಿ ಅಧಿವೇಶನಕ್ಕೆ ಬಂದಾಗ ನೇರವಾಗಿ ಕೇಳುತ್ತೇನೆ’ ಎಂದರು.
‘ನಾನು ಮಾಧ್ಯಮಗಳಿಂದ ದೂರವಿದ್ದೇನೆ. ಏನನ್ನೂ ಮಾತನಾಡಬಾರದೆಂದು ನಿರ್ಧರಿಸಿದ್ದೇನೆ. ಆದರೂ ಪದೇ ಪದೇ ನನ್ನ ಹೆಸರನ್ನೇಕೆ ತೆಗೆಯುತ್ತಾರೆ? ನನ್ನ ಕ್ಷೇತ್ರದ ಅಭಿವೃದ್ಧಿ ಬಿಟ್ಟು ಬೇರೇನೂ ವಿಚಾರ ನನ್ನ ತಲೆಯಲ್ಲಿಲ್ಲ’ ಎಂದು ಹೇಳಿದರು.
‘ನಮ್ಮೂರಲ್ಲಿ 15 ವರ್ಷದವನಾಗಿದ್ದಲೇ ಯುವಕರ ಬಳಗ ಕಟ್ಟಿದ್ದೆ. ಪ್ರಶಸ್ತಿ ಪಡೆದಿದ್ದೆ. ನಾನಿಲ್ಲದೆ ಯಾವುದೇ ತೀರ್ಮಾನವನ್ನೂ ಗ್ರಾಮಸ್ಥರು ಮಾಡುತ್ತಿರಲಿಲ್ಲ. ಅದರಿಂದ ಜನ ಸೇವೆಗೆ ಉತ್ಸಾಹ ಬಂದಿತು. ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರ, ಸಹಕಾರ ಹಾಗೂ ಉನ್ನತ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಎಲ್ಲ ರೀತಿಯ ಅನುಭವವನ್ನೂ ಪಡೆದಿದ್ದೇನೆ. ನಮ್ಮ ತಂದೆ ಪಟೇಲರಾಗಿದ್ದರು. ಅವರ ಮೇಲೆ ಒಂದು ಪ್ರಕರಣವೂ ಇರಲಿಲ್ಲ. ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿರಲಿಲ್ಲ’ ಎಂದರು.
‘ಸಾರ್ವಜನಿಕ ಜೀವನಕ್ಕೆ ಬಂದು 54 ವರ್ಷಗಳಾಗಿವೆ. ರಾಜಕೀಯವಾಗಿ ನನ್ನ ವಿರುದ್ಧ ಯಾರೂ ದೂರು ನೀಡಿಲ್ಲ. ನನ್ನ ಮಗ ಹರೀಶ್ ಗೌಡ 2010ರಿಂದ ಸಾರ್ವಜನಿಕ ಸೇವೆಯಲ್ಲಿದ್ದಾನೆ. ಆತನ ವಿರುದ್ಧವೂ ಯಾವುದೇ ಪ್ರಕರಣವಿಲ್ಲ. ದೂರಿಲ್ಲ. ದಬ್ಬಾಳಿಕೆ ನಡೆಸುವುದು ಅಥವಾ ಏಕವಚನದಲ್ಲಿ ಮಾತನಾಡುವುದನ್ನು ನಾವು ಮಾಡಿಲ್ಲ’ ಎಂದು ಹೇಳಿದರು.
‘ಸಿದ್ದರಾಮಯ್ಯ ಅವರೇ ನನ್ನ ಕೆಲಸದ ಬಗ್ಗೆ ಹೊಗಳಿದ್ದರು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಲೆಂದು ಬಯಸಿ ಬಿಜೆಪಿ ಸೇರಿದ್ದೆ. ನಾನು ಸೋತಾಗ ಯಡಿಯೂರಪ್ಪ ಅವರು ನನ್ನನ್ನು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಅಂದು ಕಾಂಗ್ರೆಸ್ ಹಾಗೂ ಜೆಡಿಎಸ್‌ನವರಿಂದ ನನ್ನ ತೇಜೋವಧೆ ಕೆಲಸ ನಡೆದಿತ್ತು. ಆಗಲೂ ನಾನು ಯಾರ ಮೂಲಕವೂ ಕರೆ ಮಾಡಿಸಿಲ್ಲ. ಸಿದ್ದರಾಮಯ್ಯ ಅವರಿಂದಲೂ ಒಮ್ಮೆಯೂ ಕರೆ ಮಾಡಿಸಿಲ್ಲ. ರಕ್ಷಿಸುವಂತೆ ಕುಮಾರಸ್ವಾಮಿ ಬಳಿಯೂ ಕೇಳಿಲ್ಲ. ಜೈಲಿಗೆ ಹೋಗುವಂತಹ ಅಪರಾಧವನ್ನು ನಾನಾಗಲಿ, ನನ್ನ ಮಗನಾಗಲಿ ಮಾಡಿಲ್ಲ. ರೇವಣ್ಣ ಯಾವ ಅರ್ಥದಲ್ಲಿ ಆ ರೀತಿ ಹೇಳಿದ್ದಾರೆಯೋ ಗೊತ್ತಿಲ್ಲ’ ಎಂದರು.
‘ರೇವಣ್ಣ ಮೂಲಕವೂ ಕರೆ ಮಾಡಿಸಿಲ್ಲ. ನನ್ನನ್ನು ಬಂಂಧಿಸುತ್ತಿದ್ದಾರೆ, ರಕ್ಷಣೆ ಕೊಡಿರೆಂದು ಯಾರನ್ನೂ ಯಾವತ್ತೂ ಕೇಳಿಲ್ಲ. ನನ್ನನ್ನು ಅರ್ಥ ಮಾಡಿಕೊಳ್ಳಲು ನನ್ನ ಕುಟುಂಬಕ್ಕೇ ಆಗಿಲ್ಲ. ಹೀಗಿರುವಾಗ, ರೇವಣ್ಣಗೆ ಹೇಗೆ ಅರ್ಥವಾಗುತ್ತದೆ? ನನ್ನ ಜೀವನ ದೇವರಿಗೆ ಮಾತ್ರ ಗೊತ್ತು’ ಎಂದು ಹೇಳಿದರು.
‘ಸಿದ್ದರಾಮಯ್ಯ ಸೇರಿದಂತೆ ಯಾವ ಮುಖ್ಯಮಂತ್ರಿಯೂ ನನ್ನನ್ನು ಬಂಧಿಸುವಂತೆ ಹೇಳಿಲ್ಲ. ಸಚಿವರೂ ಹೇಳಿಲ್ಲ. ಆ ರೀತಿಯ ಚಿಲ್ಲರೆ ಕೆಲಸ ನಮ್ಮ ಜಿಲ್ಲೆಯಲ್ಲಿ ಆಗಿಲ್ಲ. ಸಿದ್ದರಾಮಯ್ಯ ಸೇಡು ತೀರಿಸಿಕೊಳ್ಳಲು ರಾಜಕೀಯ ಮಾಡಿದ್ದಾರೆ. ಆದರೆ, ವೈಯಕ್ತಿಕವಾಗಿ ಏನನ್ನೂ ಮಾಡಿಲ್ಲ. ಬಂಧಿಸುವಂತಹ ಸೇಡನ್ನು ಯಾರೂ ಇಟ್ಟುಕೊಂಡಿಲ್ಲ’ ಎಂದು ತಿಳಿಸಿದರು.
‘ಇನ್ಮುಂದೆ ನಾನು ರಾಜಕೀಯವಾಗಿ ಯಾರ ವಿರುದ್ಧವೂ ಮಾತನಾಡುವುದಿಲ್ಲ. ನನ್ನನ್ನು ಕಳ್ಳ ಎಂದರೂ ಪ್ರತಿಕ್ರಿಯಿಸುವುದಿಲ್ಲ’ ಎಂದು ಹೇಳಿದರು.
‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದೇ ಎಚ್.ಡಿ. ರೇವಣ್ಣ. ಅವರು ಸಮ್ಮಿಶ್ರ ಸರ್ಕಾರದಲ್ಲೇ ಮುಖ್ಯಮಂತ್ರಿ ಆಗಬೇಕಿತ್ತು. ಆ ಬಗ್ಗೆ ರೇವಣ್ಣ ಒಪ್ಪಿ ಕ್ಷಮೆಯನ್ನೂ ಕೇಳಿದ್ದಾರೆ. ಡಿಸಿಎಂ ಆಗಲಾಗುತ್ತಿಲ್ಲ ಎಂಬ ಕಾರಣಕ್ಕೆ ಯಡಿಯೂರಪ್ಪ ಅವರಿಗಿದ್ದ ಅವಕಾಶವನ್ನು ದೊಡ್ಡಗೌಡರ ಜೊತೆ ಮಾತನಾಡಿ ತಪ್ಪಿಸಿದ್ದರು’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.