ADVERTISEMENT

NEP ತಿರಸ್ಕಾರದಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಹಿನ್ನಡೆ: ಪೀಪಲ್ಸ್‌ ಫೋರಂ ಕಳವಳ

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 14:12 IST
Last Updated 24 ಜನವರಿ 2024, 14:12 IST
<div class="paragraphs"><p>ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ನೇತೃತ್ವದ ನಿಯೋಗ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಎನ್‌ಇಪಿ ಸಹಿ ಸಂಗ್ರಹದ ವರದಿಯನ್ನು ಸಲ್ಲಿಸಿತು.&nbsp;ನಿಯೋಗದಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್‌, ವಿಧಾನಪರಿಷತ್‌ನ ಮಾಜಿ ಸದಸ್ಯ ಅರುಣ್ ಶಹಾಪುರ, ಪ್ರೊ.ನಂದಿನಿ ಲಕ್ಷ್ಮೀಕಾಂತ್‌ ಇದ್ದರು.&nbsp; </p></div>

ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ನೇತೃತ್ವದ ನಿಯೋಗ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಎನ್‌ಇಪಿ ಸಹಿ ಸಂಗ್ರಹದ ವರದಿಯನ್ನು ಸಲ್ಲಿಸಿತು. ನಿಯೋಗದಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್‌, ವಿಧಾನಪರಿಷತ್‌ನ ಮಾಜಿ ಸದಸ್ಯ ಅರುಣ್ ಶಹಾಪುರ, ಪ್ರೊ.ನಂದಿನಿ ಲಕ್ಷ್ಮೀಕಾಂತ್‌ ಇದ್ದರು. 

   

ಬೆಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ನಮ್ಮ ವಿದ್ಯಾರ್ಥಿಗಳು ಸಾಕಷ್ಟು ಅನುಕೂಲಗಳಿಂದ ವಂಚಿತರಾಗುತ್ತಾರೆ ಮತ್ತು ಅವರ ಶೈಕ್ಷಣಿಕ ಭವಿಷ್ಯಕ್ಕೂ ಹಿನ್ನಡೆಯಾಗುತ್ತದೆ’ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್‌ ಅವರು ಆತಂಕ ವ್ಯಕ್ತಪಡಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ– 2020 (ಎನ್‌ಇಪಿ) ಅನ್ನು ರಾಜ್ಯದಲ್ಲಿ ಮುಂದುವರೆಸುವಂತೆ ಒತ್ತಾಯಿಸಿ ‘ಪೀಪಲ್ಸ್‌ ಫೋರಂ ಫಾರ್‌ ಕರ್ನಾಟಕ ಎಜುಕೇಷನ್’ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸಿರುವ ಸಹಿ ಸಂಗ್ರಹದ ವರದಿಯನ್ನು ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರಿಗೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ADVERTISEMENT

‘ಕೇವಲ ರಾಜಕೀಯ ಕಾರಣಕ್ಕೆ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ತಿರಸ್ಕರಿಸಿದರೆ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಶೈಕ್ಷಣಿಕ ಪಾವಿತ್ರ್ಯ ಉಳಿಸಿಕೊಳ್ಳಬೇಕು. ಈ ಎಲ್ಲಾ ವಿಷಯಗಳನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ವರದಿ ಸ್ವೀಕರಿಸಿದ ರಾಜ್ಯಪಾಲರು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರನ್ನು ಕರೆಸಿ ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದ್ದಾಗಿ ಅವರು ತಿಳಿಸಿದರು.

ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ 168 ತಾಲ್ಲೂಕುಗಳಲ್ಲಿ ಸಹಿ ಸಂಗ್ರಹದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. 2,630 ಶಾಲೆ, ಕಾಲೇಜುಗಳ 83,600 ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು, 26,980 ಪೋಷಕರು, 8,88,173 ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಿದ್ದರು ಎಂದು ಮಲ್ಲೇಪುರಂ ವಿವರಿಸಿದರು.

ಪ್ರೊ. ರವೀಂದ್ರ ರೇಷ್ಮೆ ಮಾತನಾಡಿ, 2017–18 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವೇ ಎನ್‌ಇಪಿ ಕರಡು ಪ್ರತಿಗೆ ಸಹಿ ಹಾಕುವ ಮೂಲಕ ಅನುಮೋದಿಸಿದ್ದರು. ವಿವಿಧ ಹಂತಗಳಲ್ಲಿ ಸಾಕಷ್ಟು ಸಭೆಗಳನ್ನು ಮಾಡಿ, ಚರ್ಚಿಸಿದ ನಂತರವೇ ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಕೊನೆಯ ಪತ್ರಕ್ಕೂ ಅಂದಿನ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಸಹಿ ಹಾಕಿದ್ದರು. ವಿಚಿತ್ರ ಎಂದರೆ, ಅಂದು ಅನುಮೋದನೆ ನೀಡಿದವರೇ ಇಂದು ಎನ್‌ಇಪಿ ತಿರಸ್ಕರಿಸಿ, ವಿರೋಧಿಸುತ್ತಿದ್ದಾರೆ. ಈ ನಿಲುವು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಅಪಚಾರ ಮಾಡಿದಂತೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.