ADVERTISEMENT

ಮಾಧ್ಯಮ ಅಕಾಡೆಮಿ ಸಹಯೋಗದಲ್ಲಿ ಹೊಸ ಕೋರ್ಸ್‌: ಸಚಿವ ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 15:31 IST
Last Updated 13 ನವೆಂಬರ್ 2022, 15:31 IST
ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ದೂರದರ್ಶನ ಸಂಸ್ಥಾಪನಾ ದಿನ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿಯ 40ರ ಸಂಭ್ರಮಾಚರಣೆ ನೆನಪಿನ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಕೇಕ್‌ ಕತ್ತರಿಸಿದರು. ಬೆಂಗಳೂರು ದೂರದ್ರಶನ ಕೇಂದ್ರದ ಕಾರ್ಯಕ್ರಮ ವಿಭಾಗದ ಮುಖ್ಯಸ್ಥೆ ನಿರ್ಮಲಾ ಸಿ. ಎಲಿಗಾರ, ಚಿತ್ರನಟಿ ಪ್ರಿಯಾಂಕಾ ಉಪೇಂದ್ರ, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಪತ್ರಕರ್ತ ಕೆ.ಎನ್‌. ಚನ್ನೇಗೌಡ ಉಪಸ್ಥಿತರಿದ್ದರು– ಪ್ರಜಾವಾಣಿ ಚಿತ್ರ
ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ದೂರದರ್ಶನ ಸಂಸ್ಥಾಪನಾ ದಿನ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿಯ 40ರ ಸಂಭ್ರಮಾಚರಣೆ ನೆನಪಿನ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಕೇಕ್‌ ಕತ್ತರಿಸಿದರು. ಬೆಂಗಳೂರು ದೂರದ್ರಶನ ಕೇಂದ್ರದ ಕಾರ್ಯಕ್ರಮ ವಿಭಾಗದ ಮುಖ್ಯಸ್ಥೆ ನಿರ್ಮಲಾ ಸಿ. ಎಲಿಗಾರ, ಚಿತ್ರನಟಿ ಪ್ರಿಯಾಂಕಾ ಉಪೇಂದ್ರ, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಪತ್ರಕರ್ತ ಕೆ.ಎನ್‌. ಚನ್ನೇಗೌಡ ಉಪಸ್ಥಿತರಿದ್ದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೌಶಲಾಭಿವೃದ್ಧಿ ಇಲಾಖೆಯು ಕರ್ನಾಟಕ ಮಾಧ್ಯಮ ಅಕಾಡೆಮಿ ಸಹಯೋಗದಲ್ಲಿ ಪತ್ರಿಕೋದ್ಯಮ ಸರ್ಟಿಫಿಕೇಟ್‌ ಕೋರ್ಸ್‌ ಆರಂಭಿಸಲಿದೆ’ ಎಂದು ಉನ್ನತ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಪ್ರಕಟಿಸಿದರು.

ಪ್ರಸಾರ ಭಾರತಿ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಜಂಟಿಯಾಗಿ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ‘ಮಾಧ್ಯಮ ಮೈಲುಗಲ್ಲು ನಲವತ್ತರ ಹೊಸ್ತಿಲು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಪತ್ರಿಕೋದ್ಯಮ ಕ್ಷೇತ್ರದ ಈಗಿನ ಬೇಡಿಕೆಗೆ ಅನುಗುಣವಾಗಿ ಡಿಜಿಟಲ್‌ ತಂತ್ರಜ್ಞಾನದ ಬಳಕೆ ಸೇರಿದಂತೆ ಸಮಗ್ರ ಕಲಿಕೆಯ ಕೋರ್ಸ್‌ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪತ್ರಕರ್ತರ ಜ್ಞಾನ ಮತ್ತು ಕೌಶಲ ಅಭಿವೃದ್ಧಿಗೆ ಪೂರಕವಾಗಿ ಹೊಸ ಕೋರ್ಸ್‌ ಆರಂಭಿಸುವಂತೆ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮನವಿ ಮಾಡಿದರು. ವೇದಿಕೆಯಲ್ಲೇ ಸ್ಪಂದಿಸಿದ ಸಚಿವರು, ಸರ್ಟಿಫಿಕೇಟ್‌ ಕೋರ್ಸ್‌ ಆರಂಭಿಸುವ ತೀರ್ಮಾನ ಪ್ರಕಟಿಸಿದರು.

ADVERTISEMENT

‘ರಾಜ್ಯವು ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಅಧ್ಯಯನವೊಂದರ ಪ್ರಕಾರ, ರಾಜ್ಯದಲ್ಲಿನ ಶೇ 70ರಷ್ಟು ವಿದ್ಯಾರ್ಥಿಗಳು ಸ್ವಂತ ಸಾಮರ್ಥ್ಯದಿಂದ ಕಲಿಯುತ್ತಿದ್ದಾರೆ. ಶೇ 20ರಷ್ಟು ಮಂದಿ ಸ್ನೇಹಿತರ ನೆರವಿನಿಂದ ಕಲಿತರೆ, ಶೇ 10ರಷ್ಟು ವಿದ್ಯಾರ್ಥಿಗಳು ಮಾತ್ರ ಶಿಕ್ಷಕರ ನೆರವಿನಲ್ಲಿ ಕಲಿಯುತ್ತಿದ್ದಾರೆ. ಇದು ರಾಜ್ಯದ ಮಕ್ಕಳಲ್ಲಿರುವ ಅಗಾಧ ಸಾಮರ್ಥ್ಯಕ್ಕೆ ಸಾಕ್ಷಿ’ ಎಂದರು.

‘ಬೆಂಗಳೂರು ದೂರದರ್ಶನ ಕೇಂದ್ರವು 40 ಹಿರಿಯ ಪತ್ರಕರ್ತರ ಬದುಕು– ಬರಹ– ಜೀವನ ಕುರಿತ ಕಾರ್ಯಕ್ರಮ ಪ್ರಸಾರ ಮಾಡಲು ಮುಂದಾಗಿರುವುದು ಸ್ವಾಗತಾರ್ಹ. ಹಿರಿಯರ ಅನುಭವವು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಲಿದೆ’ ಎಂದು ಹೇಳಿದರು.

ಸದಾಶಿವ ಶೆಣೈ ಮಾತನಾಡಿ, ‘ಕೌಶಲಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಪತ್ರಕರ್ತರಿಗಾಗಿ ವೃತ್ತಿ ತರಬೇತಿ ಕೋರ್ಸ್‌ ಆರಂಭಿಸಲು ಸಚಿವರು ಸಮ್ಮತಿಸಿರುವುದು ಸಂತಸದ ವಿಷಯ. ಇಲಾಖೆಯ ಜತೆ ಅಕಾಡೆಮಿ ಶೀಘ್ರದಲ್ಲೇ ಒಪ್ಪಂದ ಮಾಡಿಕೊಳ್ಳಲಿದೆ’ ಎಂದರು.

ಚಿತ್ರನಟಿ ಪ್ರಿಯಾಂಕಾ ಉಪೇಂದ್ರ ಮಾತನಾಡಿ, ‘ಚಂದನ ವಾಹಿನಿಯಲ್ಲಿ ಬಳಸುವ ಭಾಷೆಯ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ. ಇದರಿಂದ ಕನ್ನಡ ಕಲಿಯಲು ಮಾರ್ಗದರ್ಶನ ದೊರೆಯುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.