ADVERTISEMENT

ಕನ್ನಡ ಕಡ್ಡಾಯಕ್ಕೆ ಕಾನೂನಿನ ಬಲ: ವಿಧಾನಸಭೆಯಲ್ಲಿ ಬೊಮ್ಮಾಯಿ ಹೇಳಿಕೆ

ಸದ್ಯವೇ ಮಸೂದೆ ಮಂಡನೆ; ವಿಧಾನಸಭೆಯಲ್ಲಿ ಬೊಮ್ಮಾಯಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 19:55 IST
Last Updated 14 ಸೆಪ್ಟೆಂಬರ್ 2022, 19:55 IST
ವಿಧಾನಸಭೆಯಲ್ಲಿ ಬಸವರಾಜ ಬೊಮ್ಮಾಯಿ
ವಿಧಾನಸಭೆಯಲ್ಲಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡುವುದಕ್ಕಾಗಿ ಕಾನೂನು ರೂಪಿಸಲು ಇದೇ ಅಧಿವೇಶನದಲ್ಲಿ ಮಸೂದೆಯೊಂದನ್ನು ಮಂಡಿಸು ವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಹಿಂದಿ ದಿವಸ್‌’ ಆಚರಣೆ ವಿರೋ ಧಿಸಿ ವಿಧಾನಸೌಧದ ಗಾಂಧಿಪ್ರತಿಮೆ ಬಳಿ ಬುಧವಾರ ಪ್ರತಿಭಟನೆ ನಡೆ ಸಿದಜೆಡಿಎಸ್ ಸದಸ್ಯರು ಬಳಿಕ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು.

ಇದಕ್ಕೆ ಭಾವನಾತ್ಮಕವಾಗಿಯೇ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ‘ಇದೇ ಮೊದಲ ಬಾರಿಗೆ ಕಾನೂನಿನ ಮೂಲಕ ಕನ್ನಡ ಭಾಷೆ ಮತ್ತು ಕನ್ನಡದ ಜನರಿಗೆ ರಕ್ಷಣೆ ನೀಡುವ ಕೆಲಸ ಮಾಡು ತ್ತಿದ್ದೇವೆ. ಕನ್ನಡವನ್ನು ಬೆಳೆಸುವ ಉದ್ದೇಶದಿಂದ ರಾಜ್ಯದಲ್ಲಿ ನೆಲೆಸಿರುವ ಅನ್ಯಭಾಷಿಕರು ಕನ್ನಡ ಕಲಿತುಕೊಳ್ಳಲು ವ್ಯವಸ್ಥೆ ಮಾಡಲಾಗುವುದು’ ಎಂದರು.

ADVERTISEMENT

‘ಭಾರತ ಒಂದು ಒಕ್ಕೂಟ ರಾಷ್ಟ್ರ. ಅನೇಕ ಭಾಷೆಗಳು ಮತ್ತು ಸಂಸ್ಕೃತಿಗಳನ್ನು ಒಳಗೊಂಡ ದೇಶ. ಎಲ್ಲ ಮಾತೃಭಾಷೆಗಳೂ ರಾಷ್ಟ್ರೀಯ ಭಾಷೆ ಗಳೇ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಕನ್ನಡದ ರಕ್ಷಣೆ ಮತ್ತು ಬೆಳವಣಿಗೆಗೆ ವಿಚಾರದಲ್ಲಿ ನಾವು ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನೆಲ, ಜಲ, ಭಾಷೆಯ ವಿಚಾರದಲ್ಲಿ ರಾಜಕೀಯವನ್ನು ಮೀರಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ರಾಜ್ಯದಲ್ಲಿ ಕನ್ನಡ ಅಗ್ರಮಾನ್ಯ ಭಾಷೆ ಯಾಗಿ ಬಳಕೆಯಾಗುತ್ತದೆ’ ಎಂದೂ ಹೇಳಿದರು.

‘ಹೊಸ ಶಿಕ್ಷಣ ನೀತಿಯಲ್ಲಿ ಆಯಾ ರಾಜ್ಯ ಭಾಷೆಗಳಿಗೆ ಹೆಚ್ಚಿನ ಆದ್ಯತೆ ನೀಡ ಲಾಗಿದೆ. ನಮ್ಮ ರಾಜ್ಯದಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ ನಡೆಸಲಾಗುತ್ತದೆ. ಮೊದಲ ಬ್ಯಾಚ್‌ನ ಮೊದಲ ಸೆಮಿಸ್ಟರ್‌ ಪರೀಕ್ಷೆ ಕನ್ನಡದಲ್ಲಿಯೇ ನಡೆದಿದೆ’ ಎಂದು ಅವರು ತಿಳಿಸಿದರು.

ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ ಸದಸ್ಯರು, ‘ಹಿಂದಿ ದಿವಸ್‌ ಆಚರಣೆ ಹೆಸರಿನಲ್ಲಿ ರಾಜ್ಯದಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಈ ವಿಷಯದ ಬಗ್ಗೆ ಮಾತನಾಡಲು ಅವಕಾಶ ನೀಡಬೇಕು’ ಎಂದು ಏರಿದ ಧ್ವನಿಯಲ್ಲಿ ಒತ್ತಾಯಿಸಿದರು.

‘ಯಾರಾದರೂ ಒಬ್ಬರು ಮಾತನಾಡಿ, ಎಲ್ಲರೂ ಒಂದೇ ಸಲ ನಿಂತು ಮಾತನಾಡಿದರೆ ವಿಷಯ ಸ್ಪಷ್ಟವಾಗುವುದಿಲ್ಲ’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಆಗ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ‘ನಮ್ಮ ದೇಶದಲ್ಲಿ ಹಲವಾರು ಭಾಷೆಗಳಿವೆ. 56ಕ್ಕೂ ಹೆಚ್ಚು ಭಾಷೆಗಳಿರುವ ಈ ರಾಷ್ಟ್ರದಲ್ಲಿ ಹಿಂದಿ ಕೂಡ ಒಂದು ಭಾಷೆ ಅಷ್ಟೇ. ಆದರೆ, ಒಂದು ಭಾಷೆ, ಒಂದು ರಾಷ್ಟ್ರ ಮಾಡಲು ಹೊರಟಿದ್ದಾರೆ. ಎಲ್ಲ ಭಾಷೆಗಳಿಗೂ ಅವುಗಳದ್ದೇ ಆದ ಇತಿಹಾಸವಿದೆ. ಆ ದೃಷ್ಟಿಯಿಂದ ಬಲವಂತದಿಂದ ಕತ್ತು ಹಿಸುಕುವ ಕೆಲಸ ಆಗಬಾರದು ಎಂಬುದು ನಮ್ಮ ಕಳಕಳಿ’ ಎಂದರು.

ಮಸೂದೆಯಲ್ಲಿ ಏನಿದೆ?

ಆಡಳಿತದ ಎಲ್ಲ ಹಂತಗಳಲ್ಲೂ ಕನ್ನಡ ಕಡ್ಡಾಯ ಮಾಡುವು ದರ ಜತೆಗೆ ರಾಜ್ಯದಲ್ಲಿ ಸ್ಥಾಪನೆಯಾಗುವ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡದೇ ಇದ್ದರೆ, ಅಂತಹ ಉದ್ಯಮಗಳಿಗೆಭೂ–ರಿಯಾಯಿತಿ, ತೆರಿಗೆ ವಿನಾಯಿತಿ, ಸಹಾಯಧನ ಮತ್ತು ಇತರ ಸೌಲಭ್ಯಗಳಿಗೆ ಕತ್ತರಿ ಹಾಕುವ ಅಂಶ ಮಸೂದೆಯಲ್ಲಿ ಸೇರಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮನವಿಯ ಮೇರೆಗೆ ಕಾನೂನು ಆಯೋಗವು ಈ ಮಸೂದೆಯ ಕರಡನ್ನು ರೂಪಿಸಿದೆ. ಇದನ್ನೇ ಅಧಿವೇಶನದಲ್ಲಿ ಮಂಡಿಸ ಲಾಗುವುದು ಎಂದು ಸರ್ಕಾರದ ಮೂಲಗಳು ಹೇಳಿವೆ.

ಪ್ರಮುಖ ಅಂಶಗಳು

l1ರಿಂದ 10 ನೇ ತರಗತಿಯವರೆಗೆ ಕರ್ನಾಟಕ ಮತ್ತು ಹೊರ ರಾಜ್ಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಎಲ್ಲರಿಗೂ ಉನ್ನತ, ತಾಂತ್ರಿಕ ಮತ್ತು ವೃತ್ತಿ ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು

lರಾಜ್ಯ ಸರ್ಕಾರ, ಸ್ಥಳೀಯ ಪ್ರಾಧಿಕಾರಗಳು, ಶಾಸನಬದ್ಧ ಮತ್ತು ಶಾಸನಬದ್ಧವಲ್ಲದ ನಿಕಾಯಗಳು, ಸಹಕಾರಿ ಸಂಘಗಳು, ರಾಜ್ಯದಲ್ಲಿ ಇತರ ಸಂಘಗಳಲ್ಲಿ ನೇಮಕಾತಿ ಪಡೆಯಲು ಕನ್ನಡ ಭಾಷಾ ಜ್ಞಾನ ಕಡ್ಡಾಯ.

lಅಧೀನ ನ್ಯಾಯಾಲಯಗಳಲ್ಲಿ ಮತ್ತು ನ್ಯಾಯಮಂಡಳಿ
ಗಳಲ್ಲಿ ಕನ್ನಡ ಭಾಷೆಯನ್ನು ಬಳಸಬೇಕು.

lಕನ್ನಡಿಗರಿಗೆ ಉದ್ಯೋಗ ಸೃಜಿಸಲು ಪ್ರತ್ಯೇಕ ಪೋರ್ಟಲ್‌ ಅನ್ನು ಸ್ಥಾಪಿಸುವುದು.

lಸರ್ಕಾರಿ ಅಧಿಕಾರಿಗಳು, ಸಾರ್ವಜನಿಕರು, ವ್ಯಾಪಾರಸ್ಥರು ಕಾಯ್ದೆ ಉಲ್ಲಂಘಿಸಿದರೆ ದಂಡವನ್ನೂ ವಿಧಿಸುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.