ADVERTISEMENT

10 ಲಕ್ಷ ಹೊಸ ರೈತರಿಗೆ ಸಾಲ

ಸಹಕಾರ ಇಲಾಖೆ ಚಿಂತನೆ ಎಂದ ಸಚಿವ ಬಂಡೆಪ್ಪ ಕಾಶೆಂಪೂರ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 20:04 IST
Last Updated 24 ಜೂನ್ 2019, 20:04 IST
   

ಬೆಂಗಳೂರು: ಸಹಕಾರಿ ವಲಯದ ಬ್ಯಾಂಕ್‌ಗಳಲ್ಲಿ ಕೃಷಿ ಸಾಲ ವ್ಯವಸ್ಥೆಗೆ ಒಳಪಡದ 10 ಲಕ್ಷ ಹೊಸ ರೈತರನ್ನು ಆ ವ್ಯಾಪ್ತಿಗೆ ತರಲು ಸಹಕಾರ ಇಲಾಖೆ ಚಿಂತನೆ ನಡೆಸಿದೆ.

‘ಸುಮಾರು 22 ಲಕ್ಷ ರೈತರು ಈಗಾಗಲೇ ಸಹಕಾರಿ ಸಾಲ ವ್ಯವಸ್ಥೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಆದರೆ, 10 ಲಕ್ಷ ರೈತರು ಕೃಷಿ ಸಾಲದ ಪ್ರಯೋಜನ ಪಡೆದಿಲ್ಲ. ಅಂತಹವರಿಗೆ ಕೃಷಿ ಸಾಲದ ಲಾಭ ಸಿಗಬೇಕು ಎಂಬುದೇ ನಮ್ಮ ಉದ್ದೇಶ’ ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ ಸೋಮವಾರ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

10 ಲಕ್ಷ ರೈತರಿಗೆ ತಲಾ ₹30 ಸಾವಿರದಂತೆ ಸಾಲ ನೀಡುವುದಾದರೂ ₹3 ಸಾವಿರ ಕೋಟಿ ಬೇಕಾಗಬಹುದು. ಇದಕ್ಕೆ ಡಿಸಿಸಿ ಬ್ಯಾಂಕ್‌ಗಳು ಶೇ 50ರಷ್ಟು ಭರಿಸಲು ಉದ್ದೇಶಿಸಿದೆ.

ADVERTISEMENT

ಉಳಿದ ಶೇ 50ರಷ್ಟು ಹಣವನ್ನು ತುಂಬಲು ಸರ್ಕಾರವನ್ನು ಕೋರಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಜತೆ ಚರ್ಚಿಸುವು ದಾಗಿಯೂ ತಿಳಿಸಿದರು.

ನಬಾರ್ಡ್‌ನಿಂದ ಮರು ಸಾಲ ನೀಡಿಕೆ ಪ್ರಮಾಣ ಶೇ 40ಕ್ಕೆ ತಗ್ಗಿದೆ. ಹಿಂದೆ ಶೇ 80ರಷ್ಟು ನೀಡುತ್ತಿದ್ದು, ಅದು ಕ್ರಮೇಣ ಇಳಿಕೆ ಮಾಡಿದೆ. ನಬಾರ್ಡ್‌ ಮರು ಸಾಲ ನೀಡಿಕೆ ಪ್ರಮಾಣ ಹೆಚ್ಚಿಸಬೇಕು ಮತ್ತು ಆದಾಯ ತೆರಿಗೆ ವ್ಯಾಪ್ತಿಯಿಂದ ಸಹಕಾರಿ ವಲಯವನ್ನು ಕೈಬಿಡಬೇಕು ಎಂದು ಕೇಂದ್ರಸರ್ಕಾರಕ್ಕೆ ಮನವಿ ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಡಿಸಿಸಿ ಮತ್ತು ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರ ಜತೆ ಮುಖ್ಯಮಂತ್ರಿಯನ್ನು ಭೇಟಿ ಮಾಡಲಾಗುವುದು. ಬಳಿಕ ಕೇಂದ್ರಕ್ಕೆ ನಿಯೋಗ ಒಯ್ಯಲಾಗುವುದು ಎಂದು ಸಚಿವರು ಹೇಳಿದರು.

ಹಲವು ವರ್ಷಗಳಿಂದ ಕೃಷಿ ಸಾಲ ಪಡೆದವರೇ ಮತ್ತೆ ಮತ್ತೆ ಪಡೆಯುತ್ತಿದ್ದಾರೆ. ಹೊಸಬರಿಗೆ ಸಾಲ ಸಿಗುತ್ತಿಲ್ಲ. ಆಧಾರ್‌ ಮತ್ತು ಪಡಿತರ ಚೀಟಿ ಹೊಂದಿಲ್ಲದ ಕಾರಣ ಸಾಕಷ್ಟು ರೈತರು ಕೃಷಿ ಸಾಲ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದರು.

ಹೊಸದಾಗಿ 10 ಲಕ್ಷ ರೈತರನ್ನು ಸಾಲದ ವ್ಯವಸ್ಥೆಗೆ ಒಳಪಡಿಸುವುದಕ್ಕೆ ಹಣಕಾಸು ಇಲಾಖೆಯ ಅನುಮತಿ ಬೇಕು. ಈ ಯೋಜನೆಗೆ ಹಣ ಹೊಂದಿಸಲು ಸರ್ಕಾರಕ್ಕೆ ಸಮಸ್ಯೆ ಆಗುವುದಿಲ್ಲ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಆದಾಯ ತೆರಿಗೆ: ಆದಾಯ ತೆರಿಗೆ ವ್ಯಾಪ್ತಿಗೆ ಸಹಕಾರ ಬ್ಯಾಂಕ್‌ಗಳನ್ನು ಒಳಪಡಿಸಿದ ಬಳಿಕ ಈವರೆಗೆ ರಾಜ್ಯದಲ್ಲಿ ಅಪೆಕ್ಸ್‌ ಬ್ಯಾಂಕ್‌ ಮತ್ತು ಡಿಸಿಸಿ ಬ್ಯಾಂಕ್‌ಗಳು ಒಟ್ಟು ₹200 ಕೋಟಿ ತೆರಿಗೆ ಪಾವತಿಸಿವೆ. ಇದರಿಂದ ಠೇವಣಿ ಇಡುವವರ ಸಂಖ್ಯೆಯೇನೂ ಕಡಿಮೆ ಆಗಿಲ್ಲ ಎಂದು ಅಪೆಕ್ಸ್‌ ಬ್ಯಾಂಕ್ ಅಧ್ಯಕ್ಷ ಕೆ.ಎನ್‌.ರಾಜಣ್ಣ ಹೇಳಿದರು.

ಜುಲೈ 10ರ ಒಳಗಾಗಿ ಸಾಲ ಮನ್ನಾ ಪೂರ್ಣ ಹಣ ಪಾವತಿ

ಸಹಕಾರಿ ಬ್ಯಾಂಕ್‌ಗಳಿಂದ 19 ಲಕ್ಷ ರೈತರು ಕೃಷಿ ಸಾಲ ಪಡೆದಿದ್ದರು. ಸಾಲ ಮನ್ನಾದ ಬಹುತೇಕ ಹಣ ಪಾವತಿಯಾಗಿದ್ದು, ಬಾಕಿ ಮೊತ್ತವನ್ನು ಜುಲೈ 10ರೊಳಗೆ ಪಾವತಿಸಿ ಸಾಲ ಮನ್ನಾ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಬಂಡೆಪ್ಪ ಕಾಶೆಂಪೂರ ತಿಳಿಸಿದರು.

19 ಲಕ್ಷ ರೈತರ ಪೈಕಿ 18,19,151 ರೈತರು ಸರ್ಕಾರ ಕೇಳಿದ್ದ ಮಾಹಿತಿ ಅಪ್‌ಲೋಡ್‌ ಮಾಡಿದ್ದಾರೆ. 1.36 ಲಕ್ಷ ರೈತರು ಮಾಹಿತಿ ಕೊಟ್ಟಿಲ್ಲ. ಆಧಾರ್‌, ಪಡಿತರ ಚೀಟಿಯನ್ನೂ ಜೋಡಣೆ ಮಾಡಿಲ್ಲ. ಸರ್ಕಾರ ಕೇಳಿದ್ದ ಕೆಲವು ದಾಖಲೆಗಳನ್ನು ನೀಡದ ಕಾರಣ ಸಮಸ್ಯೆ ಆಗಿದೆ ಎಂದರು.

ಮಂಗಳವಾರ ₹ 1,200 ಕೋಟಿ ಬಿಡುಗಡೆ ಮಾಡಲಾಗುವುದು. ಈವರೆಗೆ ಸಹಕಾರಿ ಬ್ಯಾಂಕ್‌ಗಳ 11.2 ಲಕ್ಷ ರೈತರು ಪ್ರಯೋಜನ ಪಡೆದಿದ್ದು,₹4830 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.