ADVERTISEMENT

ಕಾಂಗ್ರೆಸ್‌ ವಿರೋಧದ ಮಧ್ಯೆಯೂ ಕೊಚಿಮುಲ್ ವಿಭಜನೆ

ಹಟ ಸಾಧಿಸಿದ ಸಚಿವ ಸುಧಾಕರ್

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 16:26 IST
Last Updated 8 ನವೆಂಬರ್ 2021, 16:26 IST
ಡಾ.ಕೆ. ಸುಧಾಕರ್
ಡಾ.ಕೆ. ಸುಧಾಕರ್   

ಬೆಂಗಳೂರು: ಸಾಕಷ್ಟು ವಿರೋಧದ ಮಧ್ಯೆಯೂ ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು (ಕೊಚಿಮುಲ್) ಬೇರ್ಪಡಿಸಿ, ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರ ಒತ್ತಾಯದ ಮೇರೆಗೆ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಒಕ್ಕೂಟ ನೀಡಲು ಸಚಿವ ಸಂಪುಟ ಸೋಮವಾರ ಒಪ್ಪಿಗೆ ನೀಡಿತು.

ಕೊಚಿಮುಲ್ ಪ್ರತ್ಯೇಕಿಸುವ ಸುಧಾಕರ್‌ ಅವರ ಪ್ರಸ್ತಾವನೆಗೆ ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದು ಬಿಜೆಪಿ–ಕಾಂಗ್ರೆಸ್ ನಾಯಕರ ಮಧ್ಯದ ವಾಕ್ಸಮರ, ಆರೋಪ– ಪ್ರತ್ಯಾರೋಪಕ್ಕೂ ಕಾರಣವಾಗಿತ್ತು. ಕೊನೆಗೂ ತಮ್ಮ ಹಟವನ್ನು ಸಾಧಿಸಿ, ಪ್ರತ್ಯೇಕ ಒಕ್ಕೂಟ ಸ್ಥಾಪಿಸುವಲ್ಲಿ ಸುಧಾಕರ್ ಯಶಸ್ವಿಯಾಗಿದ್ದಾರೆ.

ADVERTISEMENT

‘ಚಿಕ್ಕಬಳ್ಳಾಪುರ ಪ್ರತ್ಯೇಕ ಜಿಲ್ಲೆಯಾಗಿ 14 ವರ್ಷಗಳು ಕಳೆದರೂ ಕೊಚಿಮುಲ್‌ ಪ್ರತ್ಯೇಕವಾಗಿರಲಿಲ್ಲ. ರೈತರು ಹಾಗೂ ಹಾಲು ಉತ್ಪಾದಕರು ಯಾವುದೇ ಸಮಸ್ಯೆಗಳಿದ್ದರೂ ಕೋಲಾರಕ್ಕೆ ಪ್ರಯಾಣಿಸಬೇಕಿತ್ತು. ಚಿಕ್ಕಬಳ್ಳಾಪುರ ಪ್ರತ್ಯೇಕ ಜಿಲ್ಲೆಯಾಗಿರುವುದರಿಂದ ಪ್ರತ್ಯೇಕವಾದ ಒಕ್ಕೂಟ, ಆಡಳಿತ ಮಂಡಳಿ ಅಗತ್ಯವಿತ್ತು. ಇದಕ್ಕಾಗಿ ಕೊಚಿಮುಲ್‌ ವಿಭಜಿಸಬೇಕಾಗಿತ್ತು’ ಎಂದು ಸುಧಾಕರ್‌ ಅವರು ಪ್ರತಿಕ್ರಿಯಿಸಿದ್ದಾರೆ.

‘ಕೊಚಿಮುಲ್‌ ಷೇರುಗಳಲ್ಲಿ ₹35 ಕೋಟಿ ಮೊತ್ತ ಚಿಕ್ಕಬಳ್ಳಾಪುರಕ್ಕೆ ಸೇರುತ್ತದೆ. ₹15 ಕೋಟಿ ಅಧಿಕ ಮೊತ್ತ ಅಭಿವೃದ್ಧಿ ನಿಧಿ ಇದೆ. ಮೀಸಲು ನಿಧಿಯಲ್ಲೂ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಪಾಲು ಇದೆ. ಎರಡು ಲಕ್ಷ ಲೀಟರ್‌ ಹಾಲು ಉತ್ಪಾದಿಸುವ ಚಾಮರಾಜನಗರ ಹಾಗೂ 50 ಸಾವಿರ ಲೀಟರ್‌ ಹಾಲು ಉತ್ಪಾದಿಸುವ ಬೀದರ್‌, ಕಲಬುರಗಿ ಜಿಲ್ಲೆಗಳಿಗೆ ಪ್ರತ್ಯೇಕ ಹಾಲು ಒಕ್ಕೂಟಗಳಿವೆ. ಇದನ್ನು ಉದಾಹರಣೆಯಾಗಿ ಪರಿಗಣಿಸಿದರೆ ಚಿಕ್ಕಬಳ್ಳಾಪುರ ಕೂಡ ಪ್ರತ್ಯೇಕ ಒಕ್ಕೂಟ ಹೊಂದುವುದು ನ್ಯಾಯಯುತ ಬೇಡಿಕೆಯಾಗಿತ್ತು. ಆಡಳಿತದ ಮತ್ತು ರೈತರ ಹಿತದೃಷ್ಟಿಯಿಂದ ಸೂಕ್ತವೂ ಆಗಿತ್ತು. ಬೇಸಿಗೆಯಲ್ಲೂ ಜಿಲ್ಲೆಯಲ್ಲಿ 3.50 ಲಕ್ಷ ಹಾಲು ಉತ್ಪಾದನೆ ಆಗುತ್ತದೆ. ಪ್ರತ್ಯೇಕ ಒಕ್ಕೂಟ ಮಾಡುವುದರಿಂದ ಯಾವುದೇ ಸಮಸ್ಯೆಯೇ ಇಲ್ಲ’ ಎಂದು ಸುಧಾಕರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.