ADVERTISEMENT

ಚಿಕ್ಕಮಗಳೂರಿಗೆ ಹೊಸ ವಿಶ್ವವಿದ್ಯಾಲಯ, ಪಿಎಚ್‌.ಡಿ ಪ್ರವೇಶ ಸರಳ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2023, 17:22 IST
Last Updated 17 ಫೆಬ್ರುವರಿ 2023, 17:22 IST
ಲ
   

ಬೆಂಗಳೂರು: ಕುವೆಂಪು ವಿಶ್ವವಿದ್ಯಾಲಯವನ್ನು ವಿಭಜಿಸಿ ಚಿಕ್ಕಮಗಳೂರಿನಲ್ಲಿ ನೂತನ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತಿದೆ. ಆದರೆ, ನೂತನ ವಿಶ್ವವಿದ್ಯಾಲಯಕ್ಕೆ ಯಾವುದೇ ಹೆಚ್ಚುವರಿ ಅನುದಾನ ಘೋಷಿಸಿಲ್ಲ.

ಬೀದರ್‌, ಹಾವೇರಿ, ಚಾಮರಾಜನಗರ, ಬಾಗಲಕೋಟೆ, ಕೊಡಗು, ಕೊಪ್ಪಳ ಮತ್ತು ಹಾಸನ ಜಿಲ್ಲೆಗಳಲ್ಲಿ ಸ್ಥಾ‍ಪಿಸಿರುವ ವಿಶ್ವವಿದ್ಯಾಲಯಗಳ ಮಾದರಿಯಲ್ಲೇ ಚಿಕ್ಕಮಗಳೂರು ವಿಶ್ವವಿದ್ಯಾಲಯವನ್ನು ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ, ಕಡಿಮೆ ಮಾನವ ಸಂಪನ್ಮೂಲ ಒಳಗೊಂಡಂತೆ ಸ್ಥಾಪಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಲಾಗಿದೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಹೊಸ ಪಾಲಿಟೆಕ್ನಿಕ್ ಆರಂಭ, ಮುಖ್ಯಮಂತ್ರಿ ತವರು ಕ್ಷೇತ್ರ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಬಂಕಾಪುರದಲ್ಲಿನ ಪಾಲಿಟೆಕ್ನಿಕ್‌ ಅನ್ನು ಸರ್ಕಾರಿ ಎಂಜಿನಿಯರಿಂಗ್ ಕಾಲೇಜಾಗಿ ಮೇಲ್ದರ್ಜೆಗೇರಿಸಲಾಗುತ್ತದೆ.

ADVERTISEMENT

ವೃತ್ತಿಪರ ಕೋರ್ಸ್‌ಗಳ ಪರೀಕ್ಷೆಯನ್ನು ಕನ್ನಡದಲ್ಲಿಯೂ ಬರೆಯಲು ಆಗುವಂತೆ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಅನ್ಯ ಭಾಷೆ ಪುಸ್ತಕಗಳನ್ನು ಭಾಷಾಂತರಿಸಲು, ಪ್ರೊ.ಸಡಗೋಪನ್‌ ನೇತೃತ್ವದ ತಜ್ಞರ ಸಮಿತಿ ಶಿಫಾರಸಿನಂತೆ ಐಟಿಐಗಳನ್ನು ಕೆಐಟಿಗಳಾಗಿ ಅಭಿವೃದ್ಧಿಪಡಿಸಲು ₹ 50 ಕೋಟಿ, ಉತ್ತಮ ಆಡಳಿತ ನಿರ್ವಹಿಸುವ ವಿಶ್ವವಿದ್ಯಾಲಯಗಳಿಗೆ ತಲಾ ₹ 50 ಲಕ್ಷ ಪ್ರೋತ್ಸಾಹಧನ ನೀಡಲಾಗಿದೆ.

ಬೆಂಗಳೂರು ನಗರದ ಕೇಂದ್ರ ಭಾಗದ 5 ಕಿ.ಮೀ. ವ್ಯಾಪ್ತಿಯ ಒಳಗಿರುವ ಪಾರಂಪರಿಕ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ಪ್ರದೇಶವನ್ನು ಪಾರಂಪರಿಕ ಮತ್ತು ಶೈಕ್ಷಣಿಕ ಜಿಲ್ಲೆಯಾಗಿ ಘೋಷಿಸಲು ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳಲ್ಲಿ ಸರಳ, ಪಾರದರ್ಶಕ ಪ್ರವೇಶಕ್ಕೆ ಏಕರೂಪ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಅತಿ ಹೆಚ್ಚು ದಾಖಲಾತಿ ಹೊಂದಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೆ ʻವೃದ್ಧಿʼ ಯೋಜನೆಯಡಿ ತಲಾ ₹ 2 ಕೋಟಿಯಂತೆ ₹ 124 ಕೋಟಿ ನೀಡಲಾಗಿದೆ. ಉನ್ನತ ಶಿಕ್ಷಣವನ್ನು ಬಲಪಡಿಸಲು ₹ 125 ಕೋಟಿ ಮೀಸಲಿಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.