ADVERTISEMENT

‘ಬಟ್ಟೆ, ಬೆಡ್‌ಶೀಟ್‌ ಖರೀದಿಗೆ ₹ 7.85 ಕೋಟಿ ಖರ್ಚು’

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವ್ಯಯ: ತನಿಖೆಗೆ ಬಿಜೆಪಿ ಶಾಸಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 14:31 IST
Last Updated 30 ಜನವರಿ 2019, 14:31 IST

ಮಡಿಕೇರಿ: ‘ಕೊಡಗು ನೆರೆ ಸಂತ್ರಸ್ತರಿಗೆ ವಿತರಿಸಲು ಬಟ್ಟೆ ಹಾಗೂ ಬೆಡ್‌ಶೀಟ್ ಖರೀದಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹ 7.85 ಕೋಟಿ ಖರ್ಚು ಮಾಡಲಾಗಿದ್ದು, ಅದರ ಸಮಗ್ರ ತನಿಖೆ ಆಗಬೇಕು’ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಇಲ್ಲಿ ಒತ್ತಾಯಿಸಿದರು.

‘ಸಾರ್ವಜನಿಕರು ಹಾಗೂ ಸಂಘ, ಸಂಸ್ಥೆಗಳು ನೀಡಿದ್ದ ಬಟ್ಟೆ ಹಾಗೂ ಬೆಡ್‌ಶೀಟ್‌ಗಳೇ ಜಿಲ್ಲಾಡಳಿತದ ಗೋದಾಮಿನಲ್ಲಿ ಇನ್ನೂ ದಾಸ್ತಾನಿವೆ. ಅದರ ನಡುವೆಯೂ ಪರಿಹಾರ ನಿಧಿಯಿಂದ ಖರೀದಿಸಿರುವ ಲೆಕ್ಕ ತೋರಿಸಲಾಗಿದೆ. ಈ ಸಂಬಂಧ ಸಮಗ್ರ ತನಿಖೆ ನಡೆಯಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಆಗ್ರಹಿಸಿದರು.

‘ರಾಜ್ಯದ ವಿವಿಧೆಡೆಯಿಂದ ಅಪಾರ ಪ್ರಮಾಣದ ಪರಿಹಾರ ಸಾಮಗ್ರಿಗಳು ನೆರವಿನ ರೂಪದಲ್ಲಿ ಹರಿದು ಬಂದಿದ್ದವು. ಆ ಸಂದರ್ಭದಲ್ಲಿ ಮಡಿಕೇರಿಯಲ್ಲಿ ದಾಸ್ತಾನಿಗೂ ಜಾಗ ಇರಲಿಲ್ಲ. ಪರಿಹಾರ ನಿಧಿಯಿಂದ ₹ 7.85 ಕೋಟಿ ವೆಚ್ಚ ತೋರಿಸಿರುವುದು ದುರಂತ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್‌ ಪೂಜಾರಿ ಹೇಳಿದರು.

ADVERTISEMENT

‘ಮಹಾಮಳೆ, ಭೂಕುಸಿತದಿಂದ 35 ಸಾವಿರ ರೈತರು ನಷ್ಟ ಅನುಭವಿಸಿದ್ದಾರೆ. ಆದರೆ, 1,277 ರೈತರಿಗೆ ಮಾತ್ರ ಪರಿಹಾರ ವಿತರಿಸಲಾಗಿದೆ. ಉಳಿದವರಿಗೆ ಬಿಡಿಗಾಸೂ ಸಿಕ್ಕಿಲ್ಲ’ ಎಂದು ತಿಳಿಸಿದರು.

‘ಸಂತ್ರಸ್ತರ ಮನೆ ನಿರ್ಮಾಣವು ಚುರುಕು ಪಡೆಯದಿದ್ದರೆ ಬಿಜೆಪಿಯು ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಲಿದೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.