ADVERTISEMENT

ಪ್ರಾಣಿಗಳ ದಾಹ ನೀಗಿಸಿದ ರೈತ: ₹25 ಲಕ್ಷ ವೆಚ್ಚದಲ್ಲಿ ಅರ್ಧ ಎಕರೆ ಕೆರೆ ನಿರ್ಮಾಣ

₹25 ಲಕ್ಷ ವೆಚ್ಚದಲ್ಲಿ ಅರ್ಧ ಎಕರೆ ಕೆರೆ ನಿರ್ಮಿಸಿದ ಎಂ.ಟಿ.ಬೇಬಿ

ರಘು ಹೆಬ್ಬಾಲೆ
Published 4 ಜನವರಿ 2019, 19:45 IST
Last Updated 4 ಜನವರಿ 2019, 19:45 IST
ಸೋಮವಾರಪೇಟೆ ತಾಲ್ಲೂಕಿನ ಅರಸಿನಗುಪ್ಪೆ ಗ್ರಾಮದ ರೈತ ಎಂ.ಟಿ. ಬೇಬಿ ಅವರು ನಿರ್ಮಿಸಿರುವ ಕೆರೆ 
ಸೋಮವಾರಪೇಟೆ ತಾಲ್ಲೂಕಿನ ಅರಸಿನಗುಪ್ಪೆ ಗ್ರಾಮದ ರೈತ ಎಂ.ಟಿ. ಬೇಬಿ ಅವರು ನಿರ್ಮಿಸಿರುವ ಕೆರೆ    

ಕುಶಾಲನಗರ: ಆಹಾರ ಹಾಗೂ ನೀರು ಅರಸಿ ತೋಟಗಳಿಗೆ ಲಗ್ಗೆಯಿಡುವ ಕಾಡು ಪ್ರಾಣಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆಗೆ ಕೆರೆಯನ್ನೇ ನಿರ್ಮಿಸುವ ಮೂಲಕ ರೈತರೊಬ್ಬರು ಮಾದರಿ ಆಗಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಣಾವಾರ ಮೀಸಲು ಅರಣ್ಯದಂಚಿನ ಅರಸಿನಗುಪ್ಪೆ ಗ್ರಾಮದ ಪ್ರಗತಿಪರ ರೈತ ಎಂ.ಟಿ.ಬೇಬಿ ತನ್ನ ಜಮೀನಿನಲ್ಲಿ ಸುಮಾರು ಅರ್ಧ ಎಕರೆ ವಿಸ್ತೀರ್ಣದಲ್ಲಿ ₹25 ಲಕ್ಷ ವೆಚ್ಚ ಮಾಡಿ ಸುಂದರ ಕೆರೆ ನಿರ್ಮಿಸಿದ್ದಾರೆ.

ನಿತ್ಯ ಜಮೀನಿಗೆ ದಾಳಿಯಿಡುತ್ತಿದ್ದ ಕಾಡಾನೆ ಹಾಗೂ ಕಾಡು ಪ್ರಾಣಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ತೋಟದೊಳಗೆ ದಾಳಿ ಮಾಡದಂತೆ ‘ಪ್ರತಿತಂತ್ರ’ ರೂಪಿಸಿದ್ದಾರೆ. ಅತ್ತ ಪ್ರಾಣಿಗಳ ದಾಹವೂ ನೀಗಿದಂತಾಗಿದೆ; ಇತ್ತ ತೋಟದಲ್ಲಿ ಬೆಳೆದಿದ್ದ ಫಸಲೂ ಉಳಿದಿದೆ.

ADVERTISEMENT

ವಿರಾಜಪೇಟೆ ತಾಲ್ಲೂಕಿನ ಬೇಳೂರು ಬಳಿಯ ಪೊನ್ನಪ್ಪಸಂತೆ ಗ್ರಾಮದ ಬೇಬಿ ಅವರು, ಗೋಣಿಕೊಪ್ಪಲು ಮತ್ತು ಶ್ರೀಮಂಗಲದಲ್ಲಿ ಟೈಲರಿಂಗ್ ವೃತ್ತಿ ನಡೆಸುತ್ತಿದ್ದರು. ನಂತರ, 1995ರಲ್ಲಿ ಅರಸಿನಗುಪ್ಪೆ ಗ್ರಾಮಕ್ಕೆ ಬಂದು ನೆಲೆಸಿದರು. ಅಲ್ಲಿಯೇ ಒಂದಷ್ಟು ಬಂಜರು ಭೂಮಿ ಖರೀದಿಸಿ ಕೃಷಿ ಚಟುವಟಿಕೆ ಆರಂಭಿಸಿದ್ದರು.

ಬೆಳೆಗಳಿಗೆ ನೀರುಣಿಸಲು ತಮ್ಮ ಜಮೀನಿನಲ್ಲಿ ಕೊರೆಸಿದ ಎಂಟು ಕೊಳವೆ ಬಾವಿಗಳು ನೀರಿಲ್ಲದೇ ವಿಫಲವಾದವು. ಮಳೆಗಾಲದಲ್ಲಿ ಬೆಟ್ಟಗಳ ಸಾಲಿನಿಂದ ಹರಿದು ಬರುವ ಮಳೆ ನೀರು ಸಂಗ್ರಹಕ್ಕಾಗಿ ಕೆರೆ ಕಟ್ಟಿದರು. ನಂತರ, ಎರಡು ಕೊಳವೆ ಬಾವಿಗಳಲ್ಲಿ ನೀರು ಬಂತು. ಈ ಕೊಳವೆ ಬಾವಿಯ ನೀರನ್ನೇ ಕೆರೆಗೆ ಹಾಯಿಸುತ್ತಿದ್ದಾರೆ.

ಈ ಕೆರೆಯನ್ನು ಹಂತಹಂತವಾಗಿ ಅಭಿವೃದ್ಧಿ ಪಡಿಸಿದರು. ಇದೀಗ ಈ ಕೆರೆಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ಇದರಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಬತ್ತಿದ್ದ ಕೊಳವೆ ಬಾವಿಗಳಲ್ಲಿ ಮತ್ತೆ ‘ಜೀವಸೆಲೆ’ ಕಾಣಿಸಿಕೊಂಡು ಅಂತರ್ಜಲ ವೃದ್ಧಿಗೂ ಪೂರಕವಾಗಿದೆ.

18 ಎಕರೆ ಭೂಮಿಯಲ್ಲಿ 10 ಎಕರೆ ಕಾಫಿ ತೋಟ ಮಾಡಿದ್ದಾರೆ. ಅಲ್ಲದೇ, 5 ಸಾವಿರ ಸಿಲ್ವರ್ ಓಕ್‌ ಹಾಗೂ 4 ಸಾವಿರಕ್ಕೂ ಹೆಚ್ಚು ಕಾಳುಮೆಣಸಿನ ಬಳ್ಳಿ ಬೆಳೆಸಿದ್ದಾರೆ. ಎಲ್ಲವೂ ಹಸಿರಾಗಿವೆ.

ಕಾಡು ಪ್ರಾಣಿಗಳಿಗೆ ಕಡಿವಾಣ: ಬಾಣಾವಾರ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ವಿಪರೀತ. ಕಾಡಿನಲ್ಲಿ ಆಹಾರ ಮತ್ತು ನೀರಿಗೆ ಕೊರತೆಯಾದರೆ ಆನೆಗಳು ನಾಡಿಗೆ ಬಂದು ಹಾವಳಿ ಮಾಡುತ್ತವೆ. ಅರಣ್ಯದಂಚಿನಲ್ಲಿಯೇ ಇರುವ ತಮ್ಮ ಜಾಗದಲ್ಲಿ ಕೆರೆ ಕಟ್ಟಿಸಿ ನೀರು ತುಂಬಿಸಿದ್ದಾರೆ. ಕಾಡಿನಿಂದ ಬರುವ ಕಾಡಾನೆ, ಕಾಡುಕೋಣ, ಜಿಂಕೆ, ಕಾಡುಹಂದಿ, ನವಿಲು ಸೇರಿದಂತೆ ಅನೇಕ ಬಗೆಯ ಪಕ್ಷಿಗಳು ಈ ಕೆರೆಗೆ ಬಂದು ದಾಹ ನೀಗಿಸಿಕೊಳ್ಳುತ್ತಿವೆ.

ಕಾಡಾನೆ ಹಾಗೂ ಇತರ ಪ್ರಾಣಿಗಳಿಂದ ತೋಟಕ್ಕೆ ಸಣ್ಣಪ್ರಮಾಣದಲ್ಲಿ ಹಾನಿ ಆಗಿರುವುದನ್ನು ಬಿಟ್ಟರೆ ಮೊದಲಿನಷ್ಟು ತೋಟಕ್ಕೆ ಹಾನಿ ಆಗುತ್ತಿಲ್ಲ ಎಂಬುದು ಬೇಬಿ ಅವರ ಅಭಿಪ್ರಾಯ. ಕೃಷಿಯೊಂದಿಗೆ ಮೀನು ಸಾಕಣೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಅದರಿಂದ ವರ್ಷಕ್ಕೆ ₹3 ಲಕ್ಷ ಆದಾಯ ಗಳಿಸುತ್ತಿದ್ದಾರೆ.

ಮತ್ತೊಂದು ಕೆರೆ ನಿರ್ಮಾಣಕ್ಕೆ ಸಿದ್ಧತೆ
ಬೃಹತ್ ಕೆರೆ ನಿರ್ಮಾಣ ಮಾಡಿರುವ ಬೇಬಿ ಅವರು ಮಳೆ ನೀರು ಸಂಗ್ರಹಕ್ಕೆ ಮತ್ತೊಂದು ಕೆರೆ ನಿರ್ಮಿಸಲು ಸಿದ್ಧತೆ ನಡೆಸಿದ್ದಾರೆ.

ಅಂದಾಜು ₹10 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಕೆರೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಬೆಟ್ಟದಿಂದ ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರನ್ನು ಸಂಗ್ರಹಿಸುವ ಮೂಲಕ ಅಂತರ್ಜಲ ವೃದ್ಧಿಸಲು ಪಣ ತೊಟ್ಟಿದ್ದಾರೆ.

*
ಕಾಡು ಪ್ರಾಣಿಗಳಿಗೂ ಕುಡಿಯುವ ನೀರು ಕಲ್ಪಿಸಿದ ತೃಪ್ತಿಯಿದೆ. ಮನುಷ್ಯರು ಮಾತ್ರ ಬದುಕಿದರೆ ಸಾಲದು; ಇತರ ಪ್ರಾಣಿ, ಪಕ್ಷಿಗಳೂ ಬದುಕಬೇಕು.
-ಎಂ.ಟಿ. ಬೇಬಿ, ಪ್ರಗತಿಪರ ರೈತ, ಅರಸಿನಗುಪ್ಪೆ

*
ಕಾಡಂಚಿನಲ್ಲಿ ಕೆರೆ ನಿರ್ಮಿಸಿ ಅಂತರ್ಜಲ ವೃದ್ಧಿಗೂ ನೆರವಾಗಿದ್ದಾರೆ. ಕಾಡಾನೆ ಹಾವಳಿ ತಡೆಗೂ ಉಪಾಯ ಕಂಡು ಹಿಡಿದಿದ್ದಾರೆ.
– ಉದಯಕುಮಾರ್‌, ಅರಸಿನಗುಪ್ಪೆ ಗ್ರಾಮ

ಕೆರೆಯ ಸುತ್ತ ನಳನಳಿಸುತ್ತಿರುವ ಹಸಿರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.