ADVERTISEMENT

ಪ್ರಮುಖ ಹುದ್ದೆ ಖಾಲಿ: ಪುನರ್ವಸತಿ ಕೆಲಸಕ್ಕೆ ಅಡ್ಡಿ

ಎರಡು ತಿಂಗಳು ರಜೆ ಮೇಲೆ ತೆರಳಿದ ಕೊಡಗು ಡಿ.ಸಿ, ವಿಶೇಷ ಜಿಲ್ಲಾಧಿಕಾರಿಯ ವರ್ಗಾವಣೆ

ಅದಿತ್ಯ ಕೆ.ಎ.
Published 14 ಜನವರಿ 2019, 17:17 IST
Last Updated 14 ಜನವರಿ 2019, 17:17 IST
ಪಿ.ಐ.ಶ್ರೀವಿದ್ಯಾ
ಪಿ.ಐ.ಶ್ರೀವಿದ್ಯಾ   

ಮಡಿಕೇರಿ: ಪ್ರಕೃತಿ ವಿಕೋಪದಿಂದ ತತ್ತರಿಸಿದ್ದ ಕೊಡಗಿನಲ್ಲಿ ಪುನರ್ವಸತಿ ಕಾರ್ಯಗಳು ವಿಳಂಬವಾಗುತ್ತಿವೆ ಎಂಬ ಆರೋಪದ ನಡುವೆಯೇ ಪುನರ್ವಸತಿ ಮೇಲುಸ್ತುವಾರಿ ಹೊಣೆ ಹೊತ್ತಿದ್ದ ಅಧಿಕಾರಿಯನ್ನೇ ಸರ್ಕಾರ ಎತ್ತಂಗಡಿ ಮಾಡಿದೆ. 10 ದಿನ ಕಳೆದರೂ ಆ ಸ್ಥಾನಕ್ಕೆ ಯಾರನ್ನೂ ನೇಮಿಸಿಲ್ಲ.

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರೂ ಎರಡು ತಿಂಗಳ ಸುದೀರ್ಘ ರಜೆ ಮೇಲೆ ತೆರಳಿದ್ದು ‘ನೆರೆ ಸಂತ್ರಸ್ತರ ಗೋಳು ಕೇಳುವವರೇ ಇಲ್ಲ’ ಎಂಬ ಆಕ್ರೋಶದ ನುಡಿಗಳು ಈಗ ವ್ಯಕ್ತವಾಗುತ್ತಿವೆ.

ಕೊಡಗಿನಲ್ಲಿ ಕಳೆದ ಆಗಸ್ಟ್‌ನಲ್ಲಿ ಮಹಾಮಳೆಯಿಂದ ಭೂಕುಸಿತವಾಗಿತ್ತು. ನೂರಾರು ಮಂದಿ ಪರಿಹಾರ ಕೇಂದ್ರ ಸೇರಿದ್ದರು. ರಾಜ್ಯ ಸರ್ಕಾರವು ಪುನರ್ವಸತಿ ಕೆಲಸಕ್ಕೆ ವಿಶೇಷ ಜಿಲ್ಲಾಧಿಕಾರಿಯಾಗಿ ಜಗದೀಶ್‌ ಅವರನ್ನು ನೇಮಿಸಿತ್ತು. 5 ತಿಂಗಳಿನಿಂದ ಪುನರ್ವಸತಿ ಕೆಲಸ ಮಾಡುತ್ತಿದ್ದ ಅವರನ್ನು ದಿಢೀರ್‌ ವರ್ಗಾವಣೆ ಮಾಡಲಾಗಿದೆ.

ADVERTISEMENT

ತುರ್ತು ಸಂದರ್ಭದಲ್ಲಿ ಬಂದಿದ್ದ ಜಗದೀಶ್‌, ಆಶ್ರಯ ಕಳೆದುಕೊಂಡ ಸಂತ್ರಸ್ತರ ಪಟ್ಟಿ ಸಿದ್ಧಪಡಿಸಿ, ಕರ್ಣಂಗೇರಿ, ಕೆ.ನಿಡುಗಣಿ, ಗಾಳಿಬೀಡು, ಮದೆ, ಸಂಪಾಜೆ, ಬಿಳಿಗೇರಿ, ಜಂಬೂರಿನಲ್ಲಿ ಪುನರ್ವಸತಿಗೆ ಜಾಗ ಗುರುತಿಸಿದ್ದರು. ಮನೆ ನಿರ್ಮಾಣ ಕಾಮಗಾರಿಗೆ ಚುರುಕು ಮುಟ್ಟಿಸುವ ಪ್ರಯತ್ನದಲ್ಲಿದ್ದರು. ಈಗ ಆ ಅಧಿಕಾರಿಯನ್ನೂ ವರ್ಗಾವಣೆ ಮಾಡಲಾಗಿದ್ದು ಕೆಲಸಗಳು ವಿಳಂಬವಾಗುತ್ತಿವೆ ಎಂದು ಸಂತ್ರಸ್ತರು ಹೇಳುತ್ತಾರೆ.

ಆರಂಭದಿಂದಲೂ ಪುನರ್ವಸತಿ ಕೆಲಸದಲ್ಲಿ ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ತೊಡಗಿಸಿಕೊಂಡಿದ್ದರು. ಭೂಕುಸಿತ, ಪ್ರವಾಹದ ವೇಳೆ ದಿಟ್ಟವಾಗಿ ಕರ್ತವ್ಯ ನಿರ್ವಹಿಸಿ ಜಿಲ್ಲೆಯ ಜನರ ಮೆಚ್ಚುಗೆ ಗಳಿಸಿದ್ದರು. ವರ್ಗಾವಣೆಗೆ ಒತ್ತಡ ಕೇಳಿಬಂದಾಗ ಜಿಲ್ಲೆಯ ಜನರು ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲಾಧಿಕಾರಿ ಪರವಾಗಿ ಜನಾಂದೋಲನ ರೂಪಿಸಿದ್ದರು. ಈಗ ತಂದೆಯ ಅನಾರೋಗ್ಯದ ಕಾರಣ ನೀಡಿ 2 ತಿಂಗಳ ಸುದೀರ್ಘ ರಜೆಯ ಮೇಲೆ ಕೇರಳಕ್ಕೆ ತೆರಳಿದ್ದಾರೆ.

ಜಿ.ಪಂ ಸಿಇಒ ಕೆ.ಲಕ್ಷ್ಮಿಪ್ರಿಯಾ ಪ್ರಭಾರ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಶ್ರೀವಿದ್ಯಾ ಅವರ ದಿಟ್ಟ ನಿಲುವು, ಕಡತ ವಿಲೇವಾರಿಯಲ್ಲಿನ ಶಿಸ್ತು ಕೆಲವು ಜನಪ್ರತಿನಿಧಿ, ಮಂತ್ರಿಯ ಕೆಂಗಣ್ಣಿಗೂ ಗುರಿಯಾಗಿತ್ತು. ತಂದೆ ಅನಾರೋಗ್ಯದಿಂದ ರಜೆ ಪಡೆದಿದ್ದಾರೆಯೇ ಅಥವಾ ಅನ್ಯ ಕಾರಣವಿದೆಯೇ ಎಂಬ ಚರ್ಚೆಗಳು ನಡೆಯುತ್ತಿವೆ. ಪ್ರತಿಕ್ರಿಯೆಗೆ ಜಿಲ್ಲಾಧಿಕಾರಿ ಲಭ್ಯವಾಗಲಿಲ್ಲ.

ಮೈಸೂರು ಭಾಗದ ಅಧಿಕಾರಿಗಳು: ಜಿಲ್ಲೆಯಿಂದ ವರ್ಗವಾದ ಅಧಿಕಾರಿಗಳ ಸ್ಥಾನಕ್ಕೆ ಮೈಸೂರು ಭಾಗದ ಅಧಿಕಾರಿಗಳೇ ಬರುತ್ತಿದ್ದಾರೆ. ಮಡಿಕೇರಿಯಲ್ಲಿ ನಡೆದ ‘ಕೊಡಗು ಪ್ರವಾಸಿ ಉತ್ಸವ’ದ ಹೊಣೆಯನ್ನೂ ಮೈಸೂರಿನ ಹಿರಿಯ ಅಧಿಕಾರಿಯೊಬ್ಬರಿಗೆ ವಹಿಸಲಾಗಿತ್ತು. ಅವರಿಗೆ ಇಲಾಖೆಯೊಂದರ ಪ್ರಭಾರ ಹೊಣೆ ಸಹ ನೀಡಲಾಗಿತ್ತು. ಆ ವಿಚಾರವೂ ಅಧಿಕಾರಿಗಳ ವಲಯದಲ್ಲಿ ಚರ್ಚೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.