ADVERTISEMENT

ದಯಾ ಮರಣಕ್ಕೆ ಸಂತ್ರಸ್ತ ಕುಟುಂಬದ ಮನವಿ

ಸೂಕ್ತ ಪರಿಹಾರ ನೀಡದಿದ್ದರೆ ಆತ್ಮಹತ್ಯೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 14:54 IST
Last Updated 18 ಜೂನ್ 2019, 14:54 IST
ದುರ್ಯೋಧನ್‌
ದುರ್ಯೋಧನ್‌   

ಮಡಿಕೇರಿ: ಕೊಡಗಿನ ನೆರೆ ಸಂತ್ರಸ್ತ ಕುಟುಂಬವೊಂದು ಸೂಕ್ತ ಪರಿಹಾರ ಸಿಗದೇ ಕಂಗಾಲಾಗಿದ್ದು ದಯಾ ಮರಣಕ್ಕೆ ಅವಕಾಶ ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿಕೊಂಡಿದೆ.

ತಾಲ್ಲೂಕಿನ ಕಾಲೂರು ಸಮೀಪದ ನಿಡುವಟ್ಟು ಗ್ರಾಮದ ಕೆ.ಕೆ.ದುರ್ಯೋಧನ್ ಮತ್ತು ಕೆ.ಕೆ.ಜೋಯಪ್ಪ ಕುಟುಂಬವು ಕಳೆದ ವರ್ಷ ಸುರಿದ ಭಾರೀ ಮಳೆಗೆ ಭೂಕುಸಿತದಿಂದ ಬದುಕಿಗೆ ಆಧಾರವಾಗಿದ್ದ ಕೃಷಿ ಜಮೀನು ಕಳೆದುಕೊಂಡಿದ್ದರು. ವಿವಿಧ ಹಂತದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರೂ ಸೂಕ್ತ ಪರಿಹಾರ ಮಾತ್ರ ಆ ಕುಟುಂಬಕ್ಕೆ ಸಿಕ್ಕಿಲ್ಲ.

ಭೂಕುಸಿತದಿಂದ ದುರ್ಯೋಧನ್ ಅವರ 2 ಎಕರೆ ಗದ್ದೆಯಲ್ಲಿ ಸಂಪೂರ್ಣ ಹೂಳು ತುಂಬಿಕೊಂಡಿದೆ. 2 ಎಕರೆ ಕಾಫಿ ತೋಟವೂ ನಾಶವಾಗಿದೆ. ಗದ್ದೆಗೆ ಮಾತ್ರ ₹ 2,700 ಪರಿಹಾರ ಸಿಕ್ಕಿದೆ. ತೋಟಕ್ಕೆ ನಯಾಪೈಸೆಯೂ ಸಿಕ್ಕಿಲ್ಲ. ಅವರ ಸಹೋದರ ಜೋಯಪ್ಪ ಅವರೂ ಕೃಷಿ ಜಮೀನು ಕಳೆದುಕೊಂಡಿದ್ದು ಪರಿಹಾರ ಸಿಕ್ಕಿಲ್ಲ.

ADVERTISEMENT

‘ಗ್ರಾಮದ ಹಲವರಿಗೆ ಸ್ವಲ್ಪವಾದರೂ ಪರಿಹಾರ ಲಭಿಸಿದೆ. ನಮಗೆ ಅದೂ ಇಲ್ಲ. ಕೆಲವರು ಬಿದ್ದು ಹೋಗಿರುವ ಕೊಟ್ಟಿಗೆಗೂ ಮನೆಯೆಂದು ಹೇಳಿ ಪರಿಹಾರ ಪಡೆದುಕೊಂಡಿದ್ದಾರೆ. ಆದರೆ, ನಮ್ಮ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡದೆ ಅಧಿಕಾರಿಗಳು ವಂಚಿಸಿದ್ದಾರೆ. ದಾಖಲೆಗಳನ್ನೂ ಅರ್ಜಿಯೊಂದಿಗೆ ಸಲ್ಲಿಸಿದ್ದೇವೆ. ಆದರೆ, ಪರಿಹಾರ ಮರೀಚಿಕೆ ಆಗಿದೆ’ ಎಂದು ಸಂತ್ರಸ್ತ ಕುಟುಂಬದ ಸದಸ್ಯರು ನೋವು ತೋಡಿಕೊಂಡಿದ್ದಾರೆ.

‘ಅಧಿಕಾರಿಗಳ ದೌರ್ಜನ್ಯದಿಂದ ಬೇಸತ್ತು ದಯಾ ಮರಣಕ್ಕೆ ಕೋರಿ ಪ್ರಧಾನಿ ಹಾಗೂ ಮುಖ್ಯಮಂತ್ರಿ ಅವರಿಗೂ ಪತ್ರ ಬರೆದಿರುವೆ’ ಎಂದು ದುರ್ಯೋಧನ್‌ ತಿಳಿಸಿದ್ದಾರೆ.

‘ನಿಡುವಟ್ಟು ಗ್ರಾಮವನ್ನು ಜಿಲ್ಲಾಡಳಿತವು ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸಿದೆ. ಮೂರು ತಿಂಗಳು ಸ್ಥಳಾಂತರ ಆಗುವಂತೆಯೂ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದರಿಂದ ಮತ್ತಷ್ಟು ಸಮಸ್ಯೆಯಾಗಿದೆ. ಜಾನುವಾರು ಮತ್ತು ಸಾಕು ಪ್ರಾಣಿಗಳನ್ನು ಬಿಟ್ಟು ಹೋಗುವುದಾರೂ ಎಲ್ಲಿಗೆ? ಸುರಕ್ಷಿತ ಜಾಗದಲ್ಲಿ ಮನೆ ಹಾಗೂ ಕೃಷಿಗೆ ಜಮೀನು ನೀಡಿ’ ಎಂದು ಸಂತ್ರಸ್ತ ಕುಟುಂಬವು ಮನವಿ ಮಾಡಿಕೊಂಡಿದೆ.

‘ದುರ್ಯೋಧನ್‌ ಅವರ ವಾಸದ ಮನೆಗೆ ಯಾವುದೇ ಹಾನಿಯಾಗಿಲ್ಲ. ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ತಲಾ ಒಂದು ಎಕರೆ ತರಿ ಭೂಮಿ ಹೊಂದಿದ್ದು ದುರ್ಯೋಧನ್‌ಗೆ ₹ 2,719 ಪರಿಹಾರ ವಿತರಿಸಲಾಗಿದೆ. ಜೋಯಪ್ಪಗೆ ಪರಿಹಾರ ವಿತರಣೆ ಬಾಕಿಯಿದೆ. ಇವರಿಬ್ಬರೂ ಸರ್ವೆ ನಂಬರ್‌ 63/2ರ 136.77 ಎಕರೆ ಪೈಕಿ ತಲಾ 2.50 ಎಕರೆ ಕಾಫಿ ತೋಟಕ್ಕೆ ಪರಿಹಾರ ಕೋರಿದ್ದು ಅರ್ಜಿದಾರರ ಹೆಸರಿನಲ್ಲಿ ಯಾವುದೇ ಖಾತೆ ಹಾಗೂ ಪಹಣಿ ಇರುವುದಿಲ್ಲ. ಆ ಜಾಗವು ಪಟ್ಟೇದಾರರ ಹೆಸರಿನಲ್ಲಿದ್ದು ಅದು ಬಾಣೆ ಜಮೀನಾಗಿದೆ’ ಎಂದು ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.