ADVERTISEMENT

ವರ್ಷಾಂತ್ಯ, ಹೊಸ ವರ್ಷಕ್ಕೆ ಕೊಡಗು ಜಿಲ್ಲೆಗೆ ಪ್ರವಾಸಿಗರ ಲಗ್ಗೆ

ಅದಿತ್ಯ ಕೆ.ಎ.
Published 1 ಜನವರಿ 2022, 13:56 IST
Last Updated 1 ಜನವರಿ 2022, 13:56 IST
ಮಡಿಕೇರಿಯ ರಾಜಾಸೀಟ್‌ನಲ್ಲಿ ಪ್ರವಾಸಿಗರು – ಪ್ರಜಾವಾಣಿ ಚಿತ್ರ
ಮಡಿಕೇರಿಯ ರಾಜಾಸೀಟ್‌ನಲ್ಲಿ ಪ್ರವಾಸಿಗರು – ಪ್ರಜಾವಾಣಿ ಚಿತ್ರ   

ಮಡಿಕೇರಿ: ಮಂಜಿನನಗರಿ, ಪ್ರವಾಸಿಗರ ಸ್ವರ್ಗ ಮಡಿಕೇರಿಗೆ ವರ್ಷಾಂತ್ಯ ಹಾಗೂ ಹೊಸ ವರ್ಷಾಚರಣೆಗೆ ಪ್ರವಾಸಿಗರ ದಂಡು ಹರಿದು ಬಂದಿತ್ತು.

ಕಳೆದ ನಾಲ್ಕೈದು ದಿನಗಳಿಂದ ಕೊಡಗಿನ ಎಲ್ಲ ಪ್ರವಾಸಿ ತಾಣಗಳಲ್ಲೂ ದಟ್ಟಣೆ ಕಂಡುಬರುತ್ತಿದೆ. ಶನಿವಾರವೂ ಎಲ್ಲೆಡೆ ಪ್ರವಾಸಿಗರ ಕಲರವ ಕೇಳಿಬಂತು.

ಪ್ರಾಕೃತಿಕ ವಿಕೋಪ, ಕೋವಿಡ್‌ ಭೀತಿಯಿಂದ ಕಳೆದ ನಾಲ್ಕು ವರ್ಷಗಳಲ್ಲಿ ಪ್ರವಾಸೋದ್ಯಮ ನೆಲಕಚ್ಚಿತ್ತು. ಕಳೆದ ಎರಡು ವರ್ಷ ಹೊಸ ವರ್ಷದ ಆಚರಣೆಗೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸಿಗರು ಜಿಲ್ಲೆಗೆ ಬಂದಿರಲಿಲ್ಲ. ಆದರೆ, ಈ ವರ್ಷ ನಿರೀಕ್ಷೆಗೂ ಮೀರಿ ಪ್ರವಾಸಿಗರು ಜಿಲ್ಲೆಗೆ ಬಂದಿದ್ದರು. ಇದರಿಂದ ನೆಲಕಚ್ಚಿದ್ದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಜೀವಕಳೆ ಬಂದಂತಾಗಿದೆ. ಪ್ರವಾಸೋದ್ಯಮ ಅವಲಂಬಿತರಿಗೂ ಆದಾಯ ಬರುತ್ತಿದ್ದು, ಅವರು ಸಂತಸದ ಅಲೆಯಲ್ಲಿ ತೇಲುವಂತಾಗಿದೆ.

ADVERTISEMENT

ನಾಲ್ಕು ದಿನಗಳ ಅಂತರದಲ್ಲಿ ರಾಜಾಸೀಟ್‌, ಓಂಕಾರೇಶ್ವರ ದೇಗುಲ, ಅಬ್ಬಿ ಜಲಪಾತ, ಮಲ್ಲಳ್ಳಿ ಜಲಪಾತ, ಭಾಗಮಂಡಲ, ತಲಕಾವೇರಿ, ನಿಸರ್ಗಧಾಮ, ದುಬಾರೆಗೆ ಸಾವಿರಾರರು ಮಂದಿ ಭೇಟಿ ಕೊಟ್ಟಿದ್ದಾರೆ. ರಾಜಾಸೀಟ್‌ನಲ್ಲಿ ಶುಕ್ರವಾರ ಸಂಜೆ, ಶನಿವಾರ ದಿನವಿಡೀ ಕಾಲಿಡಲು ಸ್ಥಳಾವಕಾಶವಿಲ್ಲದಂತೆ ಪ್ರವಾಸಿಗರು ಜಮಾಯಿಸಿದ್ದರು. ಮಾಂದಲ್‌ಪಟ್ಟಿಯಲ್ಲಿ ಮೋಡಗಳ ಚೆಲ್ಲಾಟ, ಮಂಜಿನ ಹನಿ, ಹಕ್ಕಿಗಳ ಚಿಲಿಪಿಲಿಗೆ ಪ್ರವಾಸಿಗರು ಹೊಸ ವರ್ಷದ ವೇಳೆಯಲ್ಲಿ ಕಿವಿಯಾದರು.

ದುಪ್ಪಟ್ಟು ದರ: ನೈಟ್‌ ಕರ್ಫ್ಯೂ ಹೇರಿದ ಬಳಿಕ ಬೆಂಗಳೂರು, ಮೈಸೂರು ಜನರು ಹೊಸ ವರ್ಷದ ಆಚರಣೆಗೆ ಆಯ್ಕೆ ಮಾಡಿಕೊಂಡಿದ್ದು, ಕೊಡಗಿನ ಕಾಫಿ ತೋಟದ ಮಧ್ಯದಲ್ಲಿರುವ ಹೋಂಸ್ಟೇಗಳನ್ನು. ಅಲ್ಲಿ ಮಧ್ಯರಾತ್ರಿ ತನಕವೂ ಯಾವುದೇ ಅಡಚಣೆ ಇಲ್ಲದೇ ಪಾರ್ಟಿಗಳು ನಡೆದವು. ಪ್ರವಾಸಿಗರು ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಂಡರು. ಕೊಡಗು ಖಾದ್ಯ ಸವಿದರು; ಪಾರ್ಟಿಗಳಲ್ಲಿ ಕೊಡಗಿನ ವೈನ್‌ ಹಾಗೂ ಮದ್ಯವನ್ನೂ ಪೂರೈಕೆ ಮಾಡಲಾಗಿತ್ತು.

‘ವೈನ್‌ ಶಾಪ್‌ಗಳಿಗೂ ಶುಕ್ರವಾರ ಭರ್ಜರಿ ವ್ಯಾಪಾರವಾಗಿದೆ. ಸಂಜೆಯ ವೇಳೆಗೆ ಪ್ರಮುಖ ಬ್ರ್ಯಾಂಡ್‌ಗಳ ದಾಸ್ತಾನು ಖಾಲಿಯಾಗಿತ್ತು’ ಎಂದು ವೈನ್‌ಶಾಪ್‌ ಮಾಲೀಕರೊಬ್ಬರು ತಿಳಿಸಿದರು.

ಹೋಂಸ್ಟೇಗಳಿಗೆ ದುಪ್ಪಟ್ಟು ದರವಿತ್ತು. ಮುಂಗಡವಾಗಿ ಕಾಯ್ದಿರಿಸಿದ ಪ್ರವಾಸಿಗರಿಗೆ ಮಾತ್ರ ಕಾಫಿ ತೋಟ ಮಧ್ಯ, ನಗರ ಪ್ರದೇಶಗಳಿಂದ ಹೊರ ವಲಯದ ಹೋಂಸ್ಟೇಗಳು ವಾಸ್ತವ್ಯಕ್ಕೆ ಲಭಿಸಿದವು. ಉಳಿದವರು ವಿಧಿಯಿಲ್ಲದೇ ನಗರ ಪ್ರದೇಶದ ಒಳಗಿರುವ ಹೋಂಸ್ಟೇಗಳಲ್ಲಿ ವಾಸ್ತವ್ಯ ಮಾಡಿದರು.

ದೇಗುಲಗಳಲ್ಲಿ ಪೂಜೆ: ಶನಿವಾರ ಬೆಳಿಗ್ಗೆ ಜಿಲ್ಲೆಯ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತರ ದಟ್ಟಣೆಯೂ ಹೆಚ್ಚಿತ್ತು. ಹೊಸ ವರ್ಷವು ಆರೋಗ್ಯ, ಸಮೃದ್ಧಿ, ನೆಮ್ಮದಿ ಕರುಣಿಸಲಿ ಎಂದು ಭಕ್ತರು ಪ್ರಾರ್ಥಿಸಿದರು.

‘ಚಳಿಗಾಲ ಮುಕ್ತಾಯದ ತನಕವೂ ಜಿಲ್ಲೆಗೆ ಪ್ರವಾಸಿಗರು ಬರುವ ನಿರೀಕ್ಷೆಯಿದೆ. ಅದಾದ ಮೇಲೆ ಸ್ವಲ್ಪ ತಗ್ಗಲಿದೆ. ಅದರ ನಡುವೆ ಕೋವಿಡ್‌ ಪ್ರಕರಣಗಳು ಏರಿಕೆಯಾದರೆ ಮತ್ತೆ ನಮ್ಮ ಸ್ಥಿತಿ ಹೇಳುವಂತಿಲ್ಲ’ ಎಂದು ಹೋಂಸ್ಟೇ ಮಾಲೀಕ ವಿನೋದ್‌ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.