ADVERTISEMENT

ಸಿ.ಡಿ ಪ್ರಕರಣ: ವರದಿಗಾರರು, ಶಿಕ್ಷಕಿ ಸೇರಿ ಐವರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 19:44 IST
Last Updated 12 ಮಾರ್ಚ್ 2021, 19:44 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಂಗಳೂರು: ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ ಪ್ರಕರಣದ ವಿಚಾರಣೆಗಾಗಿ ಬೆಂಗಳೂರು ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಯಾಗಿದ್ದು, ಶುಕ್ರವಾರದಿಂದಲೇ ವಿಚಾರಣೆ ಆರಂಭವಾಗಿದೆ.

ಮೊದಲ ದಿನವೇ ಸುದ್ದಿವಾಹಿನಿಗಳ ನಾಲ್ವರು ವರದಿಗಾರರು ಹಾಗೂ ರಾಮನಗರದ ಶಿಕ್ಷಕಿಯೊಬ್ಬರನ್ನು ವಿಚಾರಣೆಗೆ ಒಳಪಡಿಸಿದ ಎಸ್‌ಐಟಿ ತಂಡ, ಅವರಿಂದ ಮಾಹಿತಿ ಸಂಗ್ರಹಿಸಿತು. ಇನ್ನು ಮೂವರು ವರದಿಗಾರರು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟವೂ ನಡೆಯುತ್ತಿದೆ.

ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ದೂರು ನೀಡುವುದಕ್ಕೂ ಮುನ್ನವೇ, ರಾಜ್ಯ ಮಟ್ಟದ ಮೂರು ಸುದ್ದಿ ವಾಹಿನಿಗಳ ನಾಲ್ವರು ವರದಿಗಾರರ ಬಳಿ ಸಿ.ಡಿ ಇತ್ತು ಎಂಬ ಮಾಹಿತಿ ಎಸ್‌ಐಟಿಗೆ ಸಿಕ್ಕಿದೆ.

ADVERTISEMENT

ರಾಜ್ಯದಲ್ಲಿ ಸಿ.ಡಿ. ಪ್ರಕರಣ ಸದ್ದು ಮಾಡುತ್ತಿದ್ದಂತೆ ಇಬ್ಬರು ವರದಿಗಾರರು, ಬೆಂಗಳೂರು ತೊರೆದು ಸ್ವಂತ ಊರಿಗೆ ಹೋಗಿದ್ದರು. ಮನೆಗೆ ಹೋಗಿದ್ದ ಎಸ್‌ಐಟಿ ಅಧಿಕಾರಿಗಳು, ವರದಿಗಾರರನ್ನು ಬೆಂಗಳೂರು ಕರೆತಂದು ಮಾಹಿತಿ ಕಲೆಹಾಕುತ್ತಿದ್ದಾರೆ. ವರದಿಗಾರರೊಬ್ಬರ ಸ್ನೇಹಿತೆ ಎನ್ನಲಾದ ರಾಮನಗರದ ಶಿಕ್ಷಕಿಯೊಬ್ಬರನ್ನೂ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

‘ಪ್ರಾಥಮಿಕ ಮಾಹಿತಿ ಆಧರಿಸಿ ತನಿಖೆ ಆರಂಭಿಸಲಾಗಿದೆ. ದಿನೇಶ್‌ ಕಲ್ಲಹಳ್ಳಿಗೆ ಸಿ.ಡಿ ಕೊಟ್ಟಿದ್ದು ವರದಿಗಾರರೆಂಬ ಮಾಹಿತಿ ಇದೆ. ಹೀಗಾಗಿ, ಅನುಮಾನ ಬಂದವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅವರ ಹೇಳಿಕೆ ಪಡೆದು ತನಿಖೆ ಮುಂದುವರಿಸಲಾಗುವುದು. ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಾಗಿಲ್ಲ. ಹೀಗಾಗಿ, ವಶಕ್ಕೆ ಪಡೆಯುವ ಹಾಗೂ ಬಂಧಿಸುವ ಅಧಿಕಾರವಿಲ್ಲ. ವಿಚಾರಣೆಯನ್ನಷ್ಟೇ ನಡೆಸಲಾಗುತ್ತಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಎಸ್‌ಐಟಿ ತಂಡದಲ್ಲಿರುವ ಅಧಿಕಾರಿಗಳು: ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ, ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್, ಸಿಸಿಬಿಯ ಡಿಸಿಪಿ ಕೆ.ಪಿ. ರವಿಕುಮಾರ್, ಸಿಸಿಬಿಯ ಎಸಿಪಿ ಎಚ್‌.ಎನ್. ಧರ್ಮೇಂದ್ರ, ಇನ್‌ಸ್ಪೆಕ್ಟರ್‌ಗಳಾದ ಡಿ.ಎಂ. ಪ್ರಶಾಂತ್ ಬಾಬು ಹಾಗೂ ಬಿ. ಮಾರುತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.