ADVERTISEMENT

ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ: ನಿರಾಣಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 9:53 IST
Last Updated 4 ಡಿಸೆಂಬರ್ 2021, 9:53 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ಕಲಬುರಗಿ: ‘ಸದ್ಯಕ್ಕಂತೂ ನಾನು ಮುಖ್ಯಮಂತ್ರಿ ಆಕಾಂಕ್ಷಿ ಅಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಆ ಹುದ್ದೆಗೆ ಸಮರ್ಥ ನಾಯಕ. 2023ರ ಚುನಾವಣೆಯನ್ನು ಬೊಮ್ಮಾಯಿ ಅವರ ನೇತೃತ್ವದಲ್ಲೇ ಎದುರಿಸುತ್ತೇವೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸ್ಪಷ್ಟಪಡಿಸಿದರು.

‘ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಬದಲಾಗಲಿದ್ದಾರೆ, ನಿರಾಣಿ ಹೊಸ ಮುಖ್ಯಮಂತ್ರಿ ಆಗುತ್ತಾರೆ ಎಂಬ ಸುದ್ದಿ ಓಡಾಡುತ್ತಿದೆ. ಇದು ನಿಜವಲ್ಲ. ಕಳೆದ 30 ವರ್ಷಗಳಿಂದ ಬೊಮ್ಮಾಯಿ ಅವರು ರಾಜಕೀಯದಲ್ಲಿ ಪಳಗಿದ್ದಾರೆ. ಅವರ ತಂದೆಯೂ ಮುಖ್ಯಮಂತ್ರಿ ಆಗಿದ್ದರು. ಇಷ್ಟು ದೊಡ್ಡ ಹಿನ್ನೆಲೆ ಇರುವ ನಾಯಕ ಮುಖ್ಯಮಂತ್ರಿ ಆಗಿದ್ದು ನಮಗೂ ಖುಷಿಯ ಸಂಗತಿ. ನನಗೆ ಕೊಟ್ಟ ಜವಾಬ್ದಾರಿಯನ್ನು ಮಾತ್ರ ನಾನು ನಿಭಾಯಿಸುತ್ತೇನೆ’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬೊಮ್ಮಾಯಿ ಹಾಗೂ ನಾನು ಒಂದೇ ಕಾಲೇಜಿನಲ್ಲಿ ಓದಿದ್ದೇವೆ. ಬಹಳ ವರ್ಷಗಳಿಂದ ಅವರ ವ್ಯಕ್ತಿತ್ವದ ಪರಿಚಯವಿದೆ ನನಗೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ನಮ್ಮ ನಾಯಕರು ಆಗ ಯಾವ ಹುದ್ದೆ ವಹಿಸಿಕೊಡುತ್ತಾರೋ ಅದನ್ನು ಹೊತ್ತುಕೊಳ್ಳುತ್ತೇನೆ. ಅದು ಮುಖ್ಯಮಂತ್ರಿಯೂ ಆಗಿರಬಹುದು ಅಥವಾ ಪಕ್ಷದ ಸಂಘಟಕನೂ ಆಗಿರಬಹುದು’‌ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.