ADVERTISEMENT

ಗ್ರಾ.ಪಂ. ಮಾಜಿ ಅಧ್ಯಕ್ಷನಿಗೆ ₹1 ಲಕ್ಷ ದಂಡ ವಿಧಿಸಿದ ಎನ್‌ಜಿಟಿ

ದಾಬಸ್‌ಪೇಟೆಯ ರಾಮ್ಕಿ ಘಟಕ ಪರಿಸರ ಅನುಮೋದನೆ ಪಡೆಯದ ಆರೋಪ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 15:21 IST
Last Updated 29 ಫೆಬ್ರುವರಿ 2024, 15:21 IST
<div class="paragraphs"><p>ಎನ್‌ಜಿಟಿ</p></div>

ಎನ್‌ಜಿಟಿ

   

ನವದೆಹಲಿ: ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿರುವ ‘ರಾಮ್ಕಿ ಎನ್ವಿರೊ ಎಂಜಿನಿಯರ್ಸ್‌’ ಸಂಸ್ಥೆಯ ಅಪಾಯಕಾರಿ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಪರಿಸರ ಅನುಮೋದನೆ ಪಡೆದಿಲ್ಲ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದ ಸೋಮಪುರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಟಿ.ಎಂ. ಉಮಾಶಂಕರ್‌ ಎಂಬುವವರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ₹1 ಲಕ್ಷ ದಂಡ ವಿಧಿಸಿದೆ. 

ಪ್ರಕರಣದ ವಿಚಾರಣೆ ನಡೆಸಿದ ಚೆನ್ನೈ ಪೀಠದ ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಹಾಗೂ ನ್ಯಾಯಾಂಗ ಸದಸ್ಯ ಡಾ. ಸತ್ಯಗೋಪಾಲ್ ಕೊರ್ಲಪಾಟಿ ಅವರನ್ನು ಒಳಗೊಂಡ ಪೀಠವು ಈ ಆದೇಶ ಹೊರಡಿಸಿದೆ. ‘ಅರ್ಜಿದಾರರು ಹಾಗೂ ರಾಮ್ಕಿ ಸಂಸ್ಥೆಯ ಮಧ್ಯೆ ವೈಯಕ್ತಿಕ ದ್ವೇಷ ಇದ್ದಂತಿದೆ. ಘಟಕವನ್ನು ಸ್ಥಗಿತಗೊಳಿಸಬೇಕು ಎಂಬ ಏಕೈಕ ಉದ್ದೇಶದಿಂದ ಅರ್ಜಿದಾರರು ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ಎನ್‌ಜಿಟಿಯ ಪ್ರಧಾನ ಪೀಠದ ಮೊರೆಹೋಗಿದ್ದರು. ಘಟಕವು ಪರಿಸರ ಅನುಮೋದನೆ ಪಡೆದಿರುವುದು ತಜ್ಞರ ಸಮಿತಿಯ ಪರಿಶೀಲನೆ ವೇಳೆ ಗೊತ್ತಾಗಿತ್ತು. ಅರ್ಜಿದಾರರು ಪೀಠಕ್ಕೆ ತಪ್ಪು ಮಾಹಿತಿಗಳನ್ನು ನೀಡಿದ್ದಾರೆ ಹಾಗೂ ಸಮಯ ವ್ಯರ್ಥ ಮಾಡಿದ್ದಾರೆ’ ಎಂದು ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ADVERTISEMENT

ಅರ್ಜಿದಾರರು ದಂಡವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಾಲ್ಕು ವಾರಗಳಲ್ಲಿ ಪಾವತಿಸಬೇಕು ಎಂದೂ ತಾಕೀತು ಮಾಡಿದೆ. 

ಈ ಭೂಭರ್ತಿ ಘಟಕದ ಸಾಮರ್ಥ್ಯ 40 ಸಾವಿರ ಟಿಪಿಎ. ಆದರೆ, ಈ ಘಟಕಕ್ಕೆ ‍ಪರಿಸರ ಅನುಮೋದನೆ ಪಡೆದಿಲ್ಲ ಎಂಬುದು ಅರ್ಜಿದಾರರ ಆರೋಪ. ಅರ್ಜಿದಾರರು 2007ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಘಟಕ ಕಾರ್ಯಾರಂಭ ಮಾಡಿದೆ ಎಂಬ ಕಾರಣ ನೀಡಿ ಅವರ ಅರ್ಜಿ ವಜಾಗೊಳಿಸಲಾಗಿತ್ತು. ಈ ಘಟಕದ ಪರಿಶೀಲನೆಗೆ ಎನ್‌ಜಿಟಿ ‍ಪ್ರಧಾನ ಪೀಠವು 2019ರಲ್ಲಿ ತಜ್ಞರ ಸಮಿತಿ ರಚಿಸಿತ್ತು. ಈ ಘಟಕಕ್ಕೆ ಪರಿಸರ ಅನುಮೋದನೆ ಪಡೆಯಲಾಗಿದೆ ಎಂದು ತಜ್ಞರ ಸಮಿತಿ ವರದಿ ಸಲ್ಲಿಸಿತ್ತು. ಹೊಸದಾಗಿ ಪರಿಸರ ಅನುಮೋದನೆ ಪಡೆಯುವಂತೆ ಪ್ರಧಾನ ಪೀಠ ಸೂಚಿಸಿ ಅರ್ಜಿಯನ್ನು ವಿಲೇವಾರಿ ಮಾಡಿತ್ತು. ಆ ಬಳಿಕ ಸಂಸ್ಥೆಯವರು ಪರಿಸರ ಅನುಮೋದನೆಗೆ ಕೇಂದ್ರ ಪರಿಸರ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಘಟಕದವರು ಈಗಾಗಲೇ ಪರಿಸರ ಅನುಮೋದನೆ ಪಡೆದಿದ್ದಾರೆ ಎಂದು ಸಚಿವಾಲಯವು ಸ್ಪಷ್ಟಪಡಿಸಿ ಅರ್ಜಿಯನ್ನು ‘ಡಿ ಲಿಸ್ಟ್‌’ ಪಟ್ಟಿಗೆ ಸೇರಿಸಿತ್ತು. ಪರಿಸರ ಅನುಮೋದನೆ ಇಲ್ಲದೆಯೇ ಈ ಘಟಕವು ಕಾರ್ಯಾಚರಣೆ ನಡೆಸುತ್ತಿದೆ ಎಂದು ಆರೋಪಿಸಿ ಅರ್ಜಿದಾರರು ಚೆನ್ನೈ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. 

ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಪರಿಸರ ಇಲಾಖೆಯ ವಕೀಲರು, ಘಟಕಕ್ಕೆ 2014ರಲ್ಲೇ ಪರಿಸರ ಅನುಮೋದನೆ ನೀಡಲಾಗಿದೆ ಎಂದು ವಾದ ಮಂಡಿಸಿದ್ದರು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಕೈಗಾರಿಕಾ ಅಭಿವೃದ್ಧಿ ಮಂಡಳಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪ್ರತಿವಾದಿ ರಾಮ್ಕಿ ಸಂಸ್ಥೆಯ ವಕೀಲರು ವಾದಿಸಿದ್ದರು. ‘ಪರಿಹಾರಕ್ಕೆ ಸಂಬಂಧಿಸಿದಂತೆ ಸೂಕ್ತ ವೇದಿಕೆಗೆ ಅರ್ಜಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಿತ್ತು. ಆದರೆ, ಘಟಕವನ್ನು ಮುಚ್ಚಬೇಕು ಎಂದು ಆಗ್ರಹಿಸಿ ಅರ್ಜಿದಾರರು ಚೆನ್ನೈ ಪೀಠಕ್ಕೆ ಮೂಲ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿ ಕಾನೂನು ದೃಷ್ಟಿಕೋನಕ್ಕಿಂತ ಬೇರೇನೋ ಇರುವಂತಿದೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.