ADVERTISEMENT

ಕೈಗಾ ವಿಸ್ತರಣೆ: ಕೇಂದ್ರ, ಎನ್‌.ಪಿ.ಸಿ.ಐ.ಎಲ್‌.ಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 13:58 IST
Last Updated 19 ಡಿಸೆಂಬರ್ 2019, 13:58 IST

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ ವಿಸ್ತರಣೆಗೆ ಅನುಮತಿ ವಿಚಾರದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಚೆನ್ನೈ ಪೀಠವು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಭಾರತೀಯ ಅಣು ವಿದ್ಯುತ್ ನಿಗಮಕ್ಕೆ ಗುರುವಾರ ನೋಟಿಸ್ ಜಾರಿ ಮಾಡಿದೆ.

ಅಣು ವಿದ್ಯುತ್ ಸ್ಥಾವರದ ಐದು ಮತ್ತು ಆರನೇ ಘಟಕಗಳ ಸ್ಥಾಪನೆಗೆ ಹಸಿರುನಿಶಾನೆ ನೀಡಿದ್ದನ್ನು ಕೈಗಾ ಅಣು ವಿದ್ಯುತ್ ಸ್ಥಾವರದ ಘಟಕ ವಿರೋಧಿ ಹೋರಾಟ ಸಮಿತಿ, ಕದ್ರಾ ಅಣೆಕಟ್ಟಿನ ನಿರಾಶ್ರಿತರ ಸಂಘ ಹಾಗೂ ಕೈಗಾ ಕಾಳಿ ಸಂತ್ರಸ್ತರ ಸಂಘದಿಂದ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.ಈ ಯೋಜನೆಯು ಅತ್ಯಂತ ಸೂಕ್ಷ್ಮವಾಗಿರುವಪಶ್ಚಿಮ ಘಟ್ಟದ ಮೇಲೆ ಘೋರ ಪರಿಣಾಮ ಬೀರಲಿದೆ ಎಂದು ಅರ್ಜಿದಾರರುಆತಂಕ ವ್ಯಕ್ತಪಡಿಸಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಾಲಕೃಷ್ಣನ್ ನೇತೃತ್ವದ ಪೀಠವು, ಮುಂದಿನ ವಿಚಾರಣೆಯನ್ನು ಜ.28ಕ್ಕೆನಿಗದಿ ಮಾಡಿದೆ.

ADVERTISEMENT

ಹಿರಿಯ ವಕೀಲ ದೇವದಾಸ ಕಾಮತ್ ಅವರ ನೇತೃತ್ವದಲ್ಲಿ ವಕೀಲರಾದ ಬಿ.ಎಸ್.ಪೈ ಹಾಗೂಜಾವೇದ್ ಉರ್ ರೆಹಮಾನ್ ವಾದ ಮಂಡಿಸುತ್ತಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದಬಿ.ಎಸ್.ಪೈ, ‘ಅಣು ವಿದ್ಯುತ್ ಸ್ಥಾವರದಹೊಸ ಘಟಕಗಳಲ್ಲಿ ಉತ್ಪಾದಿಸಿದ 1,400 ಮೆಗಾವಾಟ್ ವಿದ್ಯುತ್ ಅನ್ನು 100 ಕಿಲೋಮೀಟರ್ ದೂರದ ಗ್ರಿಡ್‌ಗೆ ಸಾಗಿಸಬೇಕು. ಇದಕ್ಕೆ75 ಮೀಟರ್ ವಿಸ್ತಾರವಾದ ಕಾರಿಡಾರ್‌ನಿರ್ಮಿಸಬೇಕು. ಇದಕ್ಕೆ ಸಾವಿರಾರು ಮರಗಳನ್ನು ಕಡಿಯಬೇಕು. ಕಾಳಿ ಹುಲಿ ಸಂರಕ್ಷಿತ ವಲಯ ಹಾಗೂ ಅಣಶಿ ರಾಷ್ಟ್ರೀಯ ಉದ್ಯಾನವೂ ಯೋಜನಾ ಪ್ರದೇಶದ ಸಮೀಪದಲ್ಲೇ ಇದೆ. ಈ ಎಲ್ಲ ಅಂಶಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.