ADVERTISEMENT

ಗ್ಯಾರಂಟಿಗಳು ಈಡೇರದಿದ್ದರೇ ರಾಜಕೀಯ ಸನ್ಯಾಸತ್ವ: ಕಾಂಗ್ರೆಸ್ ಶಾಸಕ ಎನ್.ಎಚ್. ಕೋನರಡ್ಡಿ

ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಎದುರು ನವಲಗುಂದ ಶಾಸಕರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಮೇ 2023, 16:07 IST
Last Updated 26 ಮೇ 2023, 16:07 IST
ಕೋನರಡ್ಡಿ
ಕೋನರಡ್ಡಿ    

ಹುಬ್ಬಳ್ಳಿ: ‘ಚುನಾವಣೆ ಪೂರ್ವ ಘೋಷಿಸಿರುವ ಕಾಂಗ್ರೆಸ್ ಗ್ಯಾರಂಟಿ ಭರವಸೆಗಳನ್ನು ಈಡೇರಿಸದಿದ್ದರೆ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ’ ಎಂದು ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್.ಎಚ್. ಕೋನರೆಡ್ಡಿ ಹೇಳಿದರು.

ಶುಕ್ರವಾರ ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಜನತೆಗೆ ನೀಡಿದ್ದ ಭರವಸೆ ಈಡೇರಿಸಲು ಕಾಂಗ್ರೆಸ್‌ ಸರ್ಕಾರ ಬದ್ಧವಾಗಿದೆ. ಎಲ್ಲ ಭರವಸೆಗಳನ್ನು ಈಡೇರಿಸಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಈ ಹಿಂದೆ ಉದ್ಯೋಗ ನೀಡುತ್ತೇವೆ ಎಂದು ಬಿಜೆಪಿ ಭರವಸೆ ನೀಡಿತ್ತು. ನಂತರ ಮಾಡಿದ್ದೇನು? ಆದರೆ, ನಾವು ಅವರ ಹಾಗೆ ಮಾಡುವುದಿಲ್ಲ’ ಎಂದರು.

‘ಜಿಲ್ಲೆಯಲ್ಲಿನ ಪಕ್ಷದ ಹಿರಿಯ ನಾಯಕರಾದ ಸಂತೋಷ ಲಾಡ್, ವಿನಯ ಕುಲಕರ್ಣಿ ಹಾಗೂ ಪ್ರಸಾದ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡಿದರೆ ನನ್ನಷ್ಟು ಸಂತೋಷ ಪಡುವವರು ಯಾರೂ ಇಲ್ಲ. ಆದರೆ, ಸಂಪುಟದಲ್ಲಿ ಸ್ಥಾನ ನೀಡುತ್ತೇವೆ ಎಂದರೆ ಯಾರೂ ಬೇಡ ಎನ್ನುವುದಿಲ್ಲ. ಹೊಸಬರಿಗೆ ಅವಕಾಶ ನೀಡುವುದಾದರೆ ನನಗೆ ಕೃಷಿ ಸಚಿವ ಸ್ಥಾನ ನೀಡುವಂತೆ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ಜಗದೀಶ ಶೆಟ್ಟರ್‌ ಹಿರಿಯ ರಾಜಕಾರಣಿ, ಮುಖ್ಯಮಂತ್ರಿಯಾದವರು. ಅವರಿಗೆ ಸಚಿವ ಸ್ಥಾನ ನೀಡುವುದರಲ್ಲಿ ತಪ್ಪಿಲ್ಲ. ಅವರ ಹಿರಿತನಕ್ಕೆ ಪಕ್ಷ ಸಮಾನವಾದ ಹುದ್ದೆ ನೀಡುವುದು ಸೂಕ್ತ’ ಎಂದರು.

‘ಮಹದಾಯಿ ಯೋಜನೆ ಅನುಷ್ಠಾನಕ್ಕೆ ಬಿಜೆಪಿ ಟೆಂಡರ್ ಕರಿದಿರುವುದಾಗಿ ಹೇಳಿದ್ದು, ಅದರ ಬಗ್ಗೆ ಅಧ್ಯಯನ ನಡೆಸಬೇಕು. ಅಧಿಕಾರಿಗಳ ಜೊತೆ ಚರ್ಚಿಸಿ ಸದ್ಯದ ಪರಿಸ್ಥಿತಿ ತಿಳಿದುಕೊಳ್ಳಬೇಕಿದೆ. ನೋಟಿಸ್‌ ತೋರಿಸಿ ಜನರ ದಿಕ್ಕು ತಪ್ಪಿಸಲಾಗಿದೆ. ಅರಣ್ಯ ಇಲಾಖೆಯಿಂದ ಒಪ್ಪಿಗೆಯೇ ಸಿಕ್ಕಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.