ADVERTISEMENT

ಈ ಊರಲ್ಲಿ ದೀಪಾವಳಿ ಸಡಗರವೇ ಇಲ್ಲ

ಉಗಣೇಕಟ್ಟೆ ವಡ್ಡರಹಟ್ಟಿಯಲ್ಲಿ ಸಂಪ್ರದಾಯ ಪಾಲನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2018, 19:32 IST
Last Updated 5 ನವೆಂಬರ್ 2018, 19:32 IST
ಹೊಳಲ್ಕೆರೆ ತಾಲ್ಲೂಕಿನ ಉಗಣೇಕಟ್ಟೆ ವಡ್ಡರಹಟ್ಟಿ
ಹೊಳಲ್ಕೆರೆ ತಾಲ್ಲೂಕಿನ ಉಗಣೇಕಟ್ಟೆ ವಡ್ಡರಹಟ್ಟಿ   

ಹೊಳಲ್ಕೆರೆ: ದೇಶಾದ್ಯಂತ ಜನ ಬೆಳಕಿನ ಹಬ್ಬದ ಸಡಗರದಲ್ಲಿದ್ದರೆ, ಇಲ್ಲೊಂದು ಊರಿನಲ್ಲಿ ದೀಪಾವಳಿ ಹಬ್ಬವನ್ನೇ ಆಚರಿಸುವುದಿಲ್ಲ. ಎಲ್ಲಾ ಕಡೆ ಪಟಾಕಿ ಸದ್ದು ಆವರಿಸಿದ್ದರೆ, ಇಲ್ಲಿ ಮಾತ್ರ ಯಾವುದೇ ಸಡಗರ ಕಾಣಿಸುವುದಿಲ್ಲ.

ತಾಲ್ಲೂಕಿನ ಉಗಣೇಕಟ್ಟೆ ವಡ್ಡರಹಟ್ಟಿ ಗ್ರಾಮಸ್ಥರು ದೀಪಾವಳಿಯಿಂದ ದೂರವಿದ್ದಾರೆ.

‘ದೀಪಾವಳಿ ಹಬ್ಬ ಆಚರಣೆ ಮಾಡದಿರುವುದಕ್ಕೆ ಸ್ಪಷ್ಟ ಕಾರಣ ಗೊತ್ತಿಲ್ಲ. ಹಿಂದಿನಿಂದ ನಮ್ಮ ಊರಿನಲ್ಲಿ ದೀಪಾವಳಿ ಆಚರಿಸಿಲ್ಲ. ನಮ್ಮ ಪೂರ್ವಜರೂ ಹಬ್ಬ ಆಚರಿಸುತ್ತಿರಲಿಲ್ಲ. ಆದ್ದರಿಂದ ನಾವೂ ಆಚರಿಸುವುದಿಲ್ಲ. ಹಬ್ಬ ಆಚರಿಸದೇ ಇರಲು ಬಡತನವೂ ಕಾರಣ ಇರಬಹುದು. ಹಿಂದೆ ಹಬ್ಬ ಮಾಡಲು ಹೊಸಬಟ್ಟೆ, ಆಹಾರ ಸಾಮಗ್ರಿ ಖರೀದಿಸಲು ಜನರ ಹತ್ತಿರ ಹಣ ಇಲ್ಲದಿರುವುದೂ ಕಾರಣ ಇರಬಹುದು. ಈಗ ಗ್ರಾಮದ ಜನ ಆರ್ಥಿಕವಾಗಿ ಸಬಲರಾಗಿದ್ದರೂ, ಹಿಂದಿನಿಂದ ನಡೆದು ಬಂದ ಸಂಪ್ರದಾಯವನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ’ ಎನ್ನುತ್ತಾರೆ ಗ್ರಾಮದ ಹಿರಿಯ ಮುಖಂಡ ತಿಮ್ಮಪ್ಪ.

ADVERTISEMENT

‘ನಮ್ಮ ಊರಿನಲ್ಲಿ ಏಕಾದಶಿ, ಗೌರಿ, ಗಣೇಶ, ದಸರಾ, ಯುಗಾದಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ವರ್ಷಕ್ಕೊಮ್ಮೆ ಮಸಿಯಮ್ಮ ದೇವಿಯ ಜಾತ್ರೆಯನ್ನೂ ವೈಭವದಿಂದ ಆಚರಿಸುತ್ತೇವೆ. ಆದರೆ ದೀಪಾವಳಿಯನ್ನು ಮಾತ್ರ ಆಚರಿಸುವುದಿಲ್ಲ. ಗ್ರಾಮದಲ್ಲಿ 200 ಮನೆಗಳಿದ್ದು, ಯಾರೂ ಹಬ್ಬ ಮಾಡುವುದಿಲ್ಲ’ ಎನ್ನು
ತ್ತಾರೆ ಗುಡಿಗೌಡ ವೈ.ಬಸವರಾಜಪ್ಪ.

‘ಎಲ್ಲಾ ಕಡೆ ಹಬ್ಬ ಆಚರಿಸುವುದನ್ನು ನೋಡಿ ನಮಗೂ ಹಬ್ಬ ಮಾಡಬೇಕು ಎಂದು ಆಸೆಯಾಗುತ್ತದೆ. ಆದರೆ ನಮ್ಮ ಹಿರಿಯರು ಹಬ್ಬ ಮಾಡಿಲ್ಲ ಎಂದು ನಾವೂ ಆಚರಣೆ ಮಾಡುವುದಿಲ್ಲ’ ಎನ್ನುತ್ತಾರೆ ಬಿ.ಇಡಿ ವಿದ್ಯಾರ್ಥಿನಿ ಸಿ.ದೀಪಾ.

ನಮಗೂ ಹಬ್ಬ ಮಾಡಲು ಇಷ್ಟ. ಆದರೆ ಸಂಪ್ರದಾಯ ಮುರಿದು ಹಬ್ಬ ಆಚರಿಸಲು ಹಿರಿಯರು ಒಪ್ಪುವುದಿಲ್ಲ.
-ಎಚ್.ಎಂ.ಹರೀಶ್, ಎಂ.ಎ. ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.