ADVERTISEMENT

ಕಾಂಗ್ರೆಸ್ಸಿಗರಿಗೂ ಸ್ಯಾಂಟ್ರೊ ರವಿಗೂ ವ್ಯತ್ಯಾಸವಿಲ್ಲ: ಮುನಿರತ್ನ ವ್ಯಂಗ್ಯ

ವೇಶ್ಯೆಯರು ನಾವಲ್ಲ; ಸಮ್ಮಿಶ್ರ ಸರ್ಕಾರ ರಚನೆಗೆ ಎಚ್‌ಡಿಕೆ ಬಳಿ ಕರೆದೊಯ್ದವರಿಗೆ ಅನ್ವಯ: ಮುನಿರತ್ನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 12:43 IST
Last Updated 17 ಜನವರಿ 2023, 12:43 IST
   

ಕೋಲಾರ: ‘ವೇಶ್ಯೆಯರು ನಾವಲ್ಲ; ಅಂದು ಕಾಂಗ್ರೆಸ್‌ನಲ್ಲಿ ಶಾಸಕರಾಗಿದ್ದ ನಮ್ಮ ಅಭಿಪ್ರಾಯ ಆಲಿಸದೆ ಸಮ್ಮಿಶ್ರ ಸರ್ಕಾರ ರಚಿಸಲು ಎಚ್‌.ಡಿ.ಕುಮಾರಸ್ವಾಮಿ ಮುಂದೆ ಕರೆದುಕೊಂಡು ಹೋಗಿ ನಿಲ್ಲಿಸಿದವರಿಗೆ ಈ ಮಾತು ಅನ್ವಯಿಸಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ತಿರುಗೇಟು ನೀಡಿದರು.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘17 ಜನರನ್ನು ವೇಶ್ಯೆಯರು ಎಂದು ಕರೆದಿರುವ ಬಿ.ಕೆ.ಹರಿಪ್ರಸಾದ್‌ ಅವರಿಗೆ ರಾಜಕೀಯದ ಚಿತ್ರಣ ಸರಿಯಾಗಿ ಗೊತ್ತಿಲ್ಲ. ಮಾಹಿತಿ ಇದ್ದಿದ್ದರೆ ಈ ಪದ ಬಳಕೆ ಮಾಡುತ್ತಿರಲಿಲ್ಲ. ಕಾಂಗ್ರೆಸ್ಸಿಗರಿಗೂ ಸ್ಯಾಂಟ್ರೊ ರವಿಗೂ ಯಾವುದೇ ವ್ಯತ್ಯಾಸವೇ ಇಲ್ಲ’ ಎಂದರು.

‘ಈ ಪದ ನಮ್ಮ 17 ಜನರಿಗೆ ಅನ್ವಯಿಸುವುದಿಲ್ಲ. ನಾವು ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ ಗೆದ್ದಿದ್ದೇವೆ. ಜನ ನಮ್ಮನ್ನು ಆಯ್ಕೆ ಮಾಡಿದ್ದು, ಇಂಥ ಪದ ಬಳಸಬಾರದು’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಅಂದು ದೆಹಲಿಯಿಂದ ಬಂದ ಗುಲಾಂ ನಬಿ ಆಜಾದ್‌ ನೇತೃತ್ವದಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ ಹಾಗೂ ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್‌ನಿಂದ ಗೆದ್ದಿದ್ದ ನಮ್ಮನ್ನು ಕರೆದುಕೊಂಡು ಹೋಗಿ ಕುಮಾರಸ್ವಾಮಿ ಎದುರು ನಿಲ್ಲಿಸಿದಾಗ ನಾವು ಏನಾಗಿದ್ದೆವು? ಸಮ್ಮಿಶ್ರ ಸರ್ಕಾರ ರಚಿಸಿ ಎಂದು ಶಾಸಕರು ಕೇಳಿದ್ದೆವಾ? ನಾವೆಲ್ಲಾ ವಿರೋಧ ಪಕ್ಷದಲ್ಲಿ ಕೂರಲು ಸಿದ್ಧವಾಗಿದ್ದೆವು. ನಮ್ಮ ಅಭಿಪ್ರಾಯ ಆಲಿಸಿದೆ ಅವರ ಮುಂದೆ ನಮ್ಮನ್ನು ಬಿಟ್ಟ ಇವರನ್ನು ಏನೆಂದು ಕರೆಯಬೇಕು’ ಎಂದು ಪ್ರಶ್ನಿಸಿದರು.

‘ಹರಿಪ್ರಸಾದ್‌ ಅವರಿಗೆ ಕರ್ನಾಟಕದ ರಾಜಕಾರಣ ಸಂಪೂರ್ಣವಾಗಿ ಗೊತ್ತಿಲ್ಲ. ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ ಜೊತೆ ಕೆಲಸ ಮಾಡುತ್ತಾ ದೆಹಲಿಯಲ್ಲೇ ಹೆಚ್ಚು ಸಮಯ ಕಳೆದವರು. ಸುಮಾರು 40 ವರ್ಷ ರಾಷ್ಟ್ರ ರಾಜಕಾರಣದಲ್ಲಿ ಇದ್ದವರು. ಈಗ ತವರೂರು ಕರ್ನಾಟಕಕ್ಕೆ ಬಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿದ್ದಾರೆ’ ಎಂದರು.

ವರ್ತೂರು ಪ್ರಕಾಶ್‌ ಅವರನ್ನು ಸೆಳೆಯಲು ಸಿದ್ದರಾಮಯ್ಯ ಬೆಂಬಲಿಗರು ಮುಂದಾಗಿದ್ದಾರೆ ಎಂಬ ಪ್ರಶ್ನೆಗೆ, ‘ವರ್ತೂರು ಪ್ರಕಾಶ್‌ ಅವರನ್ನು ನಮ್ಮ ಪಕ್ಷ ಗೌರವಯುತವಾಗಿ ಬರಮಾಡಿಕೊಂಡಿದೆ. ನಮ್ಮ ಪಕ್ಷದ ಹಿರಿಯ ಮುಖಂಡರೂ ಆಗಿರುವ ಅವರನ್ನು ಸೆಳೆಯಲು ಸಾಧ್ಯವೇ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.