ADVERTISEMENT

ಬಂಡಿಪುರದಲ್ಲಿ ಎಲಿವೇಟೆಡ್‌ ರಸ್ತೆ ಇಲ್ಲ

ಕೇಂದ್ರ ಸರ್ಕಾರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 19:24 IST
Last Updated 7 ಜನವರಿ 2019, 19:24 IST

ಬೆಂಗಳೂರು: ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲಿವೇಟೆಡ್‌ ರಸ್ತೆ ನಿರ್ಮಾಣ ಮಾಡುವ ‍ಪ್ರಸ್ತಾವಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ರಾಜ್ಯಸಭೆಯಲ್ಲಿ ಕೇರಳದ ಎಂ.ಪಿ.ವೀರೇಂದ್ರಕುಮಾರ್ ಅವರು ಕೇಳಿದ ಪ್ರಶ್ನೆಗೆ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವ ಡಾ. ಮಹೇಶ್‌ ಶರ್ಮಾ ಈ ಉತ್ತರ ನೀಡಿದ್ದಾರೆ. ‘ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರದ ನಿರ್ಬಂಧ ತೆರವಿಗೆ ಹಾಗೂ ಕಾಮಗಾರಿ ನಡೆಸಲು ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿದೆ’ ಎಂದು ಅವರು ತಿಳಿಸಿದ್ದಾರೆ. ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣದ ಬದಲು ತಿತಿಮತಿ–ಗೋಣಿಕೊಪ್ಪ– ಕುಟ್ಟಾ ಪರ್ಯಾಯ ರಸ್ತೆಯನ್ನು ಅಭಿವೃದ್ಧಿಪಡಿಸುವುದು ಉತ್ತಮ ಎಂಬುದು ಇಲಾಖೆಯ ಅಭಿಮತ’ ಎಂದಿದ್ದಾರೆ.

ರಾತ್ರಿ ವೇಳೆ ವಾಹನ ಸಂಚಾರಕ್ಕಿರುವ ನಿರ್ಬಂಧ ತೆರವುಗೊಳಿಸಲು ಕೇರಳ ಸರ್ಕಾರವು ರಾಜ್ಯ ಸರ್ಕಾರದ ಮೇಲೆ ಹಲವು ಸಲ ಒತ್ತಡ ಹೇರಿದೆ. ಹಿಂದಿನ ಸರ್ಕಾರದಲ್ಲಿ ಇದೇ ಪ್ರಸ್ತಾಪ ಬಂದಾಗ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮುಲಾಜಿಲ್ಲದೆ ತಿರಸ್ಕರಿಸಿದ್ದರು.

ADVERTISEMENT

ಈ ಹೆದ್ದಾರಿಯಲ್ಲಿ 25 ಕಿ.ಮೀ ವ್ಯಾಪ್ತಿಯಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ನಿರ್ಬಂಧವಿದೆ. ಈ ವೇಳೆಯಲ್ಲಿ ವನ್ಯಜೀವಿಗಳು ಸಂಚರಿಸುವುದರಿಂದ ಅವುಗಳ ಮುಕ್ತ ಓಡಾಟಕ್ಕೆ ಭಂಗ ಉಂಟಾಗುತ್ತದೆ ಮತ್ತು ಈ ಹಿಂದೆ ಸಾಕಷ್ಟು ಕಾಡು ಪ್ರಾಣಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪಿವೆ ಎಂಬುದು ಕರ್ನಾಟಕ ಸರ್ಕಾರದ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.