ADVERTISEMENT

ಇಂದಿರಾ ಕ್ಯಾಂಟೀನ್‌: ಉಚಿತ ಊಟವಿಲ್ಲ

ಆರ್ಥಿಕ ಹೊರೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 20:22 IST
Last Updated 3 ಏಪ್ರಿಲ್ 2020, 20:22 IST
ಇಂದಿರಾ ಕ್ಯಾಂಟೀನ್‌
ಇಂದಿರಾ ಕ್ಯಾಂಟೀನ್‌   

ಬೆಂಗಳೂರು:ಕೊರೊನಾ ಸೋಂಕು ಹರಡಲು ಆರಂಭಿಸಿದ ಮೇಲೆ ಹೋಟೆಲ್‌ಗಳನ್ನು ಬಂದ್ ಮಾಡಲಾಗಿತ್ತು. ಈ ಹೊತ್ತಿನಲ್ಲಿ ಬಡವರು ಊಟಕ್ಕೆ ಹಾಹಾಕಾರ ಪಡುವುದನ್ನು ತಪ್ಪಿಸಲು ಕೆಲವು ಕಡೆಗಳಲ್ಲಿ ಉಚಿತವಾಗಿ ಊಟ ಪೂರೈಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿತ್ತು. ಆರ್ಥಿಕ ಹೊರೆ ಹೆಚ್ಚುತ್ತಿರುವ ಹಿನ್ನೆಲೆಯೊಳಗೆ ಉಚಿತ ಊಟದ ಬದಲು ಹಿಂದೆ ಜಾರಿಯಲ್ಲಿದ್ದ ರಿಯಾಯಿತಿ ದರದಲ್ಲಿ ಊಟ–ಉಪಾಹಾರ ನೀಡಲು ಸರ್ಕಾರ ತೀರ್ಮಾನಿಸಿದೆ.

‘ಬಡವರಿಗೆ ಸರ್ಕಾರ ಹಲವು ಯೋಜನೆಗಳ ಮೂಲಕ ಹಣ, ಧಾನ್ಯ ನೀಡುತ್ತಿರುವುದರಿಂದ ಶನಿವಾರದಿಂದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಈ ಹಿಂದಿನ ವ್ಯವಸ್ಥೆಯೇ (₹ 5 ಮತ್ತು ₹ 10ಕ್ಕೆ ಉಪಾಹಾರ, ಊಟ) ಜಾರಿಗೆ ಬರಲಿದೆ’ ಎಂದು ಸರ್ಕಾರ ತಿಳಿಸಿದೆ.

‘ಸುಮಾರು 15 ಲಕ್ಷ ಕಟ್ಟಡ/ಕೂಲಿ ಕಾರ್ಮಿಕರಿಗೆ ₹ 2 ಸಾವಿರ ಮೊತ್ತದ ನಗದು ಹಾಗೂ ಅಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ವತಿಯಿಂದ ಪ್ರತಿ ಕೂಲಿ ಕಾರ್ಮಿಕರು/ಬಡ ಕುಟುಂಬಗಳಿಗೆ 2 ತಿಂಗಳಿಗೆ ಸಾಕಾಗುವಷ್ಟು ಅಹಾರ ಪದಾರ್ಥ ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಈ ಹಿಂದಿನ ದರದಲ್ಲಿ ಆಹಾರ ಪೂರೈಸುವ ವ್ಯವಸ್ಥೆ ಮಾಡಲಾಗುತ್ತಿದೆ, ಆಹಾರದ ದುರ್ಬಳಕೆ ಆಗುವುದನ್ನು ತಪ್ಪಿಸುವ ಉದ್ದೇಶವೂ ಇದರ ಹಿಂದೆ ಇದೆ’ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಈ ಮಧ್ಯೆ, ಬಿಬಿಎಂಪಿ ಆಯುಕ್ತರು ಸಹ ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ನೀಡಿದ್ದು, ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಟೋಕನ್‌ಗಳನ್ನು ಪಡೆದು ಆಹಾರದ ಪೊಟ್ಟಣಗಳನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.