ನವದೆಹಲಿ: ಅನುದಾನ ಹಾಗೂ ತೆರಿಗೆ ಪಾಲು ಹಂಚಿಕೆಯಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಅನ್ಯಾಯವಾಗಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.
ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮಂಗಳವಾರ ಸಂಜೆ ಉತ್ತರ ನೀಡಿದ ಅವರು, ‘ರಾಜ್ಯದಲ್ಲಿ 2014ರ ಬಳಿಕ 5,123 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ. ಏಳು ವಿಮಾನ ನಿಲ್ದಾಣಗಳು ಕಾರ್ಯಾಚರಣೆ ಆರಂಭಿಸಿವೆ. 1,652 ಕಿ.ಮೀ. ಉದ್ದದ ರೈಲ್ವೆ ಜಾಲ ಸೇರ್ಪಡೆಯಾಗಿದೆ. ಇದು ಹಿಂದಿನ ಯುಪಿಎ ಅವಧಿಗಿಂತ ಹೆಚ್ಚು’ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಮೈಸೂರಿನ ಸಂಸದ ಯದುವೀರ್ ಒಡೆಯರ್, ‘ಅನುದಾನ ಹಂಚಿಕೆಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸುಳ್ಳು ಅಂಕಿ ಅಂಶಗಳನ್ನು ನೀಡಿ ಜನರ ದಿಕ್ಕು ತಪ್ಪಿಸುತ್ತಿದೆ’ ಎಂದರು.
ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ‘ರಾಜ್ಯದಿಂದ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಪ್ರತಿವರ್ಷ ₹4.30 ಲಕ್ಷ ಕೋಟಿ ಪಾವತಿ ಆಗುತ್ತಿದೆ. ಆದರೆ, ಪಾವತಿಯಾದ ಮೊತ್ತದಲ್ಲಿ ವಾಪಸ್ ಬರುತ್ತಿರುವುದು 13 ಪೈಸೆಯಷ್ಟು ಮಾತ್ರ. ನಬಾರ್ಡ್ ಸಾಲ ಪ್ರಮಾಣವನ್ನು ಕಡಿತ ಮಾಡಿರುವುದು ಇದಕ್ಕೆ ತಾಜಾ ಉದಾಹರಣೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.