ADVERTISEMENT

ಗೋವಾ ಯೋಜನೆಗೆ ಇಲ್ಲ ರಾಜ್ಯದ 435 ಎಕರೆ ಕಾಡು

ಯೋಜನೆಗೆ ಅಧಿಕಾರಿಗಳಿಂದ ಶಿಫಾರಸು; ಅರಣ್ಯ ಸಚಿವರಿಂದ ತಡೆ

ಮಂಜುನಾಥ್ ಹೆಬ್ಬಾರ್‌
Published 25 ಮಾರ್ಚ್ 2024, 20:22 IST
Last Updated 25 ಮಾರ್ಚ್ 2024, 20:22 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ನವದೆಹಲಿ: ಗೋವಾ– ತಮ್ನಾರ್ 400 ಕೆ.ವಿ. ವಿದ್ಯುತ್ ಮಾರ್ಗಕ್ಕೆ ಕರ್ನಾಟಕದ 435 ಎಕರೆ ಅರಣ್ಯ ಒದಗಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡಿದ್ದ ಶಿಫಾರಸಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ತಡೆ ಒಡ್ಡಿದ್ದಾರೆ.

ಧಾರವಾಡ ಜಿಲ್ಲೆಯ ನರೇಂದ್ರದಿಂದ ಗೋವಾಕ್ಕೆ 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಮಾರ್ಗ ನಿರ್ಮಿಸಲು ಮುಂದಾಗಿರುವ ‘ಗೋವಾ ತಮ್ನಾರ್ ಟ್ರಾನ್ಸ್‌ಮಿಷನ್ ಪ್ರಾಜೆಕ್ಟ್ ಲಿಮಿಟೆಡ್’, ಅರಣ್ಯವನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲು ಒಪ್ಪಿಗೆ ನೀಡುವಂತೆ ಪ್ರಸ್ತಾವ ಸಲ್ಲಿಸಿತ್ತು. ಈ ಯೋಜನೆಗೆ ಅರಣ್ಯ ಬಳಸಲು ಅನುಮತಿ ನೀಡಬಹುದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌), ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಶಿಫಾರಸು ಮಾಡಿದ್ದರು. 

‘ಉದ್ದೇಶಿತ ವಿದ್ಯುತ್ ಮಾರ್ಗವು ದಾಂಡೇಲಿ ಆನೆ ಕಾರಿಡಾರ್‌, ಭೀಮಗಡ ಅಭಯಾರಣ್ಯದ ಪರಿಸರ ಸೂಕ್ಷ್ಮವಲಯ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮವಲಯ ಹಾಗೂ ದಾಂಡೇಲಿ ಅಭಯಾರಣ್ಯಗಳ ಮೂಲಕ ಹಾದುಹೋಗಲಿದೆ. ದೊಡ್ಡ ಪ್ರಮಾಣದಲ್ಲಿ ಕಾಡು ನಾಶವಾಗಲಿದೆ’ ಎಂದು ಪರಿಸರ ಕಾರ್ಯಕರ್ತರು ಸಚಿವರಿಗೆ ದೂರು ನೀಡಿದ್ದರು. ಆ ಬಳಿಕ ಕಡತ ತರಿಸಿಕೊಂಡು ಪರಿಶೀಲಿಸಿದ ಸಚಿವರು, ಪ್ರಸ್ತಾವನೆ ತಿರಸ್ಕರಿಸುವಂತೆ ತಾಕೀತು ಮಾಡಿದ್ದಾರೆ.

ADVERTISEMENT

ಸಚಿವರ ನಿರ್ದೇಶನದ ಹಿನ್ನೆಲೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್‌. ಮಂಜುನಾಥ ಪ್ರಸಾದ್‌ ಅವರು ಪಿಸಿಸಿಎಫ್ ಅವರಿಗೆ ಮಾರ್ಚ್‌ 16ರಂದು ಪತ್ರ ಬರೆದು, ಅರಣ್ಯ ಹಾಗೂ ಪರಿಸರ ಸಂರಕ್ಷಣೆ ಉದ್ದೇಶದಿಂದ ಭವಿಷ್ಯದಲ್ಲಿ ಇಂತಹ ಪ್ರಸ್ತಾವಗಳನ್ನು ಪ್ರಾಥಮಿಕ ಹಂತದಲ್ಲೇ ತಿರಸ್ಕರಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ. ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದರೆ ವಿವಾದ ಸೃಷ್ಟಿಯಾಗಬಹುದು ಎಂಬ ಕಾರಣಕ್ಕೆ ಸಚಿವರು ತಡೆ ಒಡ್ಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಕೋರ್ಟ್‌ ಮೆಟ್ಟಿಲೇರಿದ್ದ ಗೋವಾ ಫೌಂಡೇಷನ್‌: 

ವಿದ್ಯುತ್‌ ಮಾರ್ಗಕ್ಕೆ ಅರಣ್ಯ ಬಳಸಲು ಅನುಮತಿ ನೀಡುವಂತೆ ‘ಗೋವಾ ತಮ್ನಾರ್ ಟ್ರಾನ್ಸ್‌ಮಿಷನ್ ಪ್ರಾಜೆಕ್ಟ್ ಲಿಮಿಟೆಡ್’ ಕರ್ನಾಟಕ ಸರ್ಕಾರಕ್ಕೆ 2019ರಲ್ಲಿ ಪ್ರಸ್ತಾವ ಸಲ್ಲಿಸಿತ್ತು. 2020ರಲ್ಲಿ ಕೆನರಾ ವೃತ್ತದ ಸಿಸಿಎಫ್‌ ಸ್ಥಳ ಪರಿಶೀಲನೆ ನಡೆಸಿ, ‘ಪಶ್ಚಿಮಘಟ್ಟದ ದಟ್ಟ ಅರಣ್ಯದಲ್ಲಿ ಈ ಯೋಜನೆ ಹಾದು ಹೋಗಲಿದೆ. ಈ ಯೋಜನೆಯಿಂದ ಹುಲಿ ಆವಾಸಸ್ಥಾನದ ಮೇಲೂ ಪರಿಣಾಮ ಬೀರಲಿದೆ. ಈ ಪ್ರಸ್ತಾವವನ್ನು ತಿರಸ್ಕರಿಸಬೇಕು’ ಎಂದು ಶಿಫಾರಸು ಮಾಡಿದ್ದರು. ಯೋಜನೆಯ ಪ್ರಸ್ತಾವವನ್ನು ತಿರಸ್ಕರಿಸುವುದು ಉತ್ತಮ ಎಂದೂ ಪಿಸಿಸಿಎಫ್ 2021ರಲ್ಲಿ ವರದಿ ಸಲ್ಲಿಸಿದ್ದರು. 

ಯೋಜನೆಯ ಅನುಷ್ಠಾನಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ‘ಗೋವಾ ಫೌಂಡೇಷನ್‌’ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಈ ಕುರಿತು ವರದಿ ನೀಡುವಂತೆ ಸಿಇಸಿಗೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ‘ಈ ಮಾರ್ಗದಲ್ಲಿ ಈಗಾಗಲೇ 220 ಕೆ.ವಿ.ಮಾರ್ಗ ಇದೆ. ಹೊಸಮಾರ್ಗ ನಿರ್ಮಾಣಕ್ಕೆ ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ. ಅದರ ಬದಲು ಈಗಿರುವ ಮಾರ್ಗ ಬಳಸುವುದು ಉತ್ತಮ. ಅಲ್ಲದೆ, ಕರ್ನಾಟಕ ಸರ್ಕಾರದ ಅನುಮತಿ ಪಡೆದೇ ಮುಂದುವರಿಯಬೇಕು’ ಎಂದು ಸಿಇಸಿ ಶಿಫಾರಸು ಮಾಡಿತ್ತು. ಬಳಿಕ ಸಂಸ್ಥೆಯು ಹೊಸದಾಗಿ ಪ್ರಸ್ತಾವ ಸಲ್ಲಿಸಿತ್ತು. ಆ ಪ್ರಸ್ತಾವಕ್ಕೆ ಒಪ್ಪಿಗೆ ನೀಡಬಹುದು ಎಂದು ಪಿಸಿಸಿಎಫ್‌, ಸಿಸಿಎಫ್ ಶಿಫಾರಸು ಮಾಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.