ADVERTISEMENT

ಶ್ರೀರಂಗಪಟ್ಟಣ| ವಿಎಚ್‌ಪಿಯ ‘ಮೂಲ ಮಂದಿರ ಚಲೋ’ಗೆ ಅವಕಾಶ ನಿರಾಕರಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 12:41 IST
Last Updated 2 ಜೂನ್ 2022, 12:41 IST
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಬಳಿ ಪೊಲೀಸರು ಕಟ್ಟೆಚ್ಚರ ವಹಿಸಿರುವುದು
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಬಳಿ ಪೊಲೀಸರು ಕಟ್ಟೆಚ್ಚರ ವಹಿಸಿರುವುದು   

ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿ ಹನುಮಂತನ ಪೂಜೆಗೆ ಅವಕಾಶ ಕೋರಿ ಭಜರಂಗದಳ, ವಿಶ್ವ ಹಿಂದೂ ಪರಿಷತ್‌ ಸಂಘಟನೆ ಸದಸ್ಯರು ಜೂನ್‌ 4ರಂದು ನಡೆಸಲು ಉದ್ದೇಶಿಸಿದ್ದ ‘ಮೂಲ ಮಂದಿರ ಚಲೋ’ಗೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ.

ಶಾಂತಿ ಕದಡುವ ಯಾವುದೇ ಕಾರ್ಯಕ್ರಮ ನಡೆಸಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿರುವ ಪೊಲೀಸರು ಮಸೀದಿ ಸುತ್ತಲೂ ಬಿಗಿ ಬಂದೋಬಸ್ತ್‌ ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜೂನ್‌ 3ರ ಸಂಜೆ 6 ಗಂಟೆಯಿಂದ ಜೂನ್‌ 5ರ ಬೆಳಿಗ್ಗೆ 6 ಗಂಟೆವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್‌ ಶ್ವೇತಾ ಎನ್‌. ರವೀಂದ್ರ ಗುರುವಾರ ಆದೇಶ ಹೊರಡಿಸಿದ್ದಾರೆ.

ಮಸೀದಿಯ ಸುತ್ತ ಬ್ಯಾರಿಕೇಡ್‌ ಹಾಕಲಾಗಿದ್ದು 3 ಕೆಎಸ್‌ಆರ್‌ಪಿ, 5 ಡಿಎಆರ್‌ ತುಕಡಿಗಳು ಭದ್ರತೆಗೆ ನಿಯೋಜಿಸಲಾಗಿದೆ. ನಿಷೇಧಾಜ್ಞೆ ಜಾರಿ ಇರುವ ಅವಧಿಯಲ್ಲಿ ಯಾವುದೇ ಸಭೆ, ಸಮಾರಂಭ, ಜಾಥಾ, ಪ್ರತಿಭಟನೆ, ರಥಯಾತ್ರೆ, ಉತ್ಸವ, ಮೆರವಣಿಗೆಗಳಿಗೆ ಅವಕಾಶ ಇರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಶ್ರೀರಂಗಪಟ್ಟಣದಲ್ಲಿ ನಡೆಯಬೇಕಿದ್ದ ಸಂತೆಯನ್ನು ಸ್ಥಳೀಯ ಪುರಸಭೆ ಭಾನುವಾರಕ್ಕೆ ಮುಂದೂಡಿದೆ.

ADVERTISEMENT

‘ಶಾಂತಿ ಕದಡುವ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ. ಅನುಮತಿ ಕೇಳಿದವರಿಗೆ ನಿಯಮಗಳ ಕುರಿತಂತೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಇಷ್ಟಾದರೂ ಯಾವುದೇ ಚಟುವಟಿಕೆ ನಡೆಸಿದರೆ ಅಂಥವರ ವಿರುದ್ಧ ಕ್ರಮ ಜರುಗಿಸುತ್ತೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.