ADVERTISEMENT

ಲಸಿಕೆ ವಿಷಯದಲ್ಲಿ ರಾಜಕೀಯ ಬೇಡ– ಸಿಎಂಗೆ ಸಿದ್ದರಾಮಯ್ಯ ಪತ್ರ

​ಪ್ರಜಾವಾಣಿ ವಾರ್ತೆ
Published 11 ಮೇ 2021, 11:43 IST
Last Updated 11 ಮೇ 2021, 11:43 IST
   

ಬೆಂಗಳೂರು: ‘ಕೋವಿಡ್ ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡದೆ ಎಲ್ಲ ಅರ್ಹರಿಗೂ ಲಸಿಕೆ ಹಾಕುವ ಮೂಲಕ ರಾಜ್ಯದ ಜನರನ್ನು ಕಾಪಾಡಬೇಕು’ ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

‘ಮುಂದಿನ ಕೆಲವು ತಿಂಗಳಲ್ಲಿ ಮೂರನೇ ಅಲೆ ಆರಂಭವಾಗುತ್ತದೆಂದು ತಜ್ಞರು ಹೇಳುತ್ತಿದ್ದಾರೆ. ಆದ್ದರಿಂದ ಒಂದೆರಡು ತಿಂಗಳಲ್ಲಿ ಸಂಪೂರ್ಣ ಲಸಿಕೆ ಹಾಕಿಸಿ ಮುಗಿಸಬೇಕು. ಲಸಿಕೆಗಳನ್ನು ಕೇಂದ್ರದಿಂದಾದರೂ ಪಡೆಯಬೇಕು ಅಥವಾ ರಾಜ್ಯದಲ್ಲೇ ಉತ್ಪಾದಿಸಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಪತ್ರದಲ್ಲೇನಿದೆ: ರಾಜ್ಯದಲ್ಲಿ 18 ವರ್ಷ ತುಂಬಿದವರು 4.37 ಕೋಟಿ ಜನರಿದ್ದಾರೆ. ಈ ಪೈಕಿ ಈವರೆಗೆ ಇದುವರೆಗೆ ಎರಡೂ ಡೋಸ್ ಲಸಿಕೆ ನೀಡಿರುವುದು 17.77 ಲಕ್ಷ ಜನರಿಗೆ ಮಾತ್ರ. ಅಂದರೆ, ಕೇವಲ ಶೇ 4.06 ರಷ್ಟು ಜನರಿಗೆ ಮಾತ್ರ. ರಾಜ್ಯದಲ್ಲಿ 6,85,327 ಜನ ಹೆಲ್ತ್ ಕೇರ್ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗಿದೆ. ಆದರೆ, ಎರಡನೇ ಡೋಸ್ ನೀಡಿರುವುದು ಕೇವಲ 4,39,162 ಜನರಿಗೆ. 4,40,302 ಜನ ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೊಸ್ ನೀಡಲಾಗಿದ್ದರೆ, ಎರಡನೆ ಡೋಸ್ ನೀಡಿರುವುದು ಕೇವಲ 1,67,581 ಜನರಿಗೆ ಮಾತ್ರ. 60 ವರ್ಷ ತುಂಬಿದವರಲ್ಲಿ 8,41,056 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. 44 ರಿಂದ 59 ವರ್ಷದ ಒಳಗೆ ಇರುವವರಿಗೆ 3,29,952 ಜನರಿಗೆ ಮಾತ್ರ ಎರಡನೆ ಡೋಸ್ ಲಸಿಕೆ ನೀಡಲಾಗಿದೆ.

ADVERTISEMENT

ಮೊದಲ ಡೋಸ್ ಎಷ್ಟೇ ಜನರಿಗೆ ನೀಡಿದ್ದರೂ ನಿಗದಿತ ಸಮಯದಲ್ಲಿ ಎರಡನೆ ಲಸಿಕೆ ನೀಡದಿದ್ದರೆ ಲಸಿಕೆ ಉಪಯೋಗಕ್ಕೆ ಬರುವುದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಅವಧಿ ಮೀರುವ ಮೊದಲೇ ಎರಡನೆ ಡೋಸ್‌ ನೀಡಬೇಕು. 18 ರಿಂದ 45ರ ವಯೋಮಾನದವರಲ್ಲಿ ಇದುವರೆಗೆ ಕೇವಲ 5,759 ಜನರಿಗೆ ಮೊದಲ ಡೋಸ್ ನೀಡಲಾಗಿದೆ. ಕೋವಿಡ್ ಎರಡನೇ ಅಲೆಯಲ್ಲಿ ಹೆಚ್ಚು ಬಾಧಿತರಾಗಿ ಸಾವು–ನೋವುಗಳಿಗೆ ಗುರಿಯಾಗುತ್ತಿರುವವರಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಯುವ ಸಮುದಾಯಕ್ಕೆ ಯುದ್ಧೋಪಾದಿಯಲ್ಲಿ ಲಸಿಕೆ ನೀಡಬೇಕಾಗಿದೆ.

ಕೇಂದ್ರ ಸರ್ಕಾರ ಯುವ ಜನತೆಗೆ ಲಸಿಕೆ ನೀಡುವ ವಿಚಾರದಲ್ಲೂ ರಾಜಕಾರಣ ಮಾಡುತ್ತಿದೆ. ಗುಜರಾತ್‌, ಉತ್ತರ ಪ್ರದೇಶ ಮುಂತಾದ ರಾಜ್ಯಗಳ ಯುವಕರಿಗೆ ವ್ಯಾಪಕ ಪ್ರಮಾಣದಲ್ಲಿ ಲಸಿಕೆ ಹಾಕಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಬೆರಣಿಕೆಯಷ್ಟು ಜನರಿಗೆ ಮಾತ್ರ ನೀಡಲಾಗಿದೆ. ಕೇಂದ್ರ ಮಾಡುತ್ತಿರುವ ಅವೈಜ್ಞಾನಿಕ ಕ್ರಮಗಳಿಂದಾಗಿ ದೇಶದ ಜನ ಭಾರಿ ಗಂಡಾಂತರ ಎದುರಿಸಬೇಕಾಗಿದೆ. ದೇಶದ ಯಾವುದೋ ಒಂದು ಭಾಗದ ಜನರಿಗೆ ಲಸಿಕೆ ನೀಡಿ ಉಳಿದವರು ವಂಚಿತರಾದರೆ ವೈರಸ್‌ ರೂಪಾಂತರಗೊಂಡು ಲಸಿಕೆಗಳಿಗೂ ಪ್ರತಿರೋಧ ಬೆಳೆಸಿಕೊಂಡರೆ ಹಾಕುವ ಲಸಿಕೆಗಳೂ ಸಹ ನಿರುಪಯುಕ್ತವಾಗುತ್ತವೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಹೀಗಾದರೆ ಲಸಿಕೆ ಹಾಕಿಸಿಕೊಂಡವರು ಕೂಡಾ ಗಂಡಾಂತರಕ್ಕೆ ತುತ್ತಾಗುತ್ತಾರೆ.

ನಮ್ಮ ದೇಶದ ಪ್ರಸ್ತುತ ಆಡಳಿತ ನಡೆಸುತ್ತಿರುವವರು ಕಾರ್ಪೊರೇಟ್ ಕಂಪನಿಗಳಿಗೆ ಅಡಿಯಾಳುಗಳಂತೆ ವರ್ತಿಸುತ್ತಿದ್ದಾರೆ. ಆದ್ದರಿಂದಲೇ ಲಸಿಕೆ ದರ ₹ 150, ₹ 300, ₹ 400, ₹ 600 ಎಂದು ವ್ಯಾಪಾರಕ್ಕಿಡಲಾಗಿದೆ. ತಾರತಮ್ಯವಾದ ಈ ಬೆಲೆಗಳನ್ನು ಕೇಂದ್ರ ಸರ್ಕಾರವೇ ನಿಗದಿ ಮಾಡುತ್ತಿದೆ. ಇದನ್ನು ನೋಡಿದರೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಅಂಗಡಿ ನಡೆಸುತ್ತಿದೆಯೇ ಎಂಬ ಅನುಮಾನ ಬರುತ್ತಿದೆ. ಈ ಕುರಿತು ಸುಪ್ರೀಂ ಕೋರ್ಟ್‌ ಕೂಡ ಆಕ್ಷೇಪ ವ್ಯಕ್ತಪಡಿಸುತ್ತಿದೆ.

ದೇಶದ ಎಲ್ಲ ಜನರಿಗೆ ಏಕಕಾಲದಲ್ಲಿ ಸಮರೋಪಾದಿಯಲ್ಲಿ ಉಳಿದ ಎರಡು ತಿಂಗಳಲ್ಲಿ ಲಸಿಕೆ ಹಾಕಿ ಮುಗಿಸಬೇಕು. ಹೀಗೆ ಮಾಡಬೇಕಾದರೆ ಲಸಿಕೆ ಉತ್ಪಾದನೆ ಹೆಚ್ಚಬೇಕು. ಸಮರ್ಥವಾಗಿರುವ ಹತ್ತಾರು ಕಂಪನಿಗಳನ್ನು ಆಯ್ಕೆ ಮಾಡಿ ಈಗ ಸಿದ್ಧಪಡಿಸಿರುವ ಲಸಿಕೆ ತಯಾರಿಕೆಯ ಪ್ರೋಟೋಕಾಲನ್ನು, ನಿಯಮಗಳನ್ನು ಎಲ್ಲರಿಗೂ ನೀಡಿ ಸೂಕ್ತವಾದ ಬ್ರಿಡ್ಜ್ ಟ್ರಯಲ್ ನಡೆಸಿ ಮನೆ ಮನೆಗೆ ತೆರಳಿ ಆಂದೋಲನದ ರೀತಿಯಲ್ಲಿ ಲಸಿಕೆ ನೀಡಬೇಕು. ಎರಡು ಕಂಪನಿಗಳು ತಿಂಗಳಿಗೆ ಹತ್ತು ಕೋಟಿ ಲಸಿಕೆಗಳನ್ನು ತಯಾರಿಸಿದರೆ, ಇಪ್ಪತ್ತು ಕಂಪನಿಗಳು ನೂರು ಕೋಟಿ ಲಸಿಕೆ ತಯಾರಿಸಬಲ್ಲವು. ಮಹಾರಾಷ್ಟ್ರ ಈಗಾಗಲೆ ಕೋವ್ಯಾಕ್ಸಿನ್ ಲಸಿಕೆಯನ್ನು ರಾಜ್ಯ ಸರ್ಕಾರದ ಅಧೀನದಲ್ಲಿರುವ ಕಂಪನಿಗಳ ಮೂಲಕ ಉತ್ಪಾದನೆಯಲ್ಲಿ ತೊಡಗಿದೆ ಎಂಬ ವರದಿಗಳಿವೆ. ಕರ್ನಾಟಕವೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು.

ಕೋವಿಡ್ ನಿಯಂತ್ರಣದಲ್ಲೂ ಮುಂಬೈ ಮಾದರಿಯನ್ನು ಸುಪ್ರೀಂ ಕೋರ್ಟ್‌ ಶ್ಲಾಘಿಸಿದೆ. ಅದರ ಕುರಿತೂ ಕೂಡ ರಜ್ಯ ಸರ್ಕಾರ ತಿಳುವಳಿಕೆ ಪಡೆದುಕೊಳ್ಳುವುದು ಸೂಕ್ತ. 18 ವರ್ಷ ತುಂಬಿದವರಿಗೆ ಲಸಿಕೆ ಹಾಕಲು ಆನ್‌ಲೈನ್ ಮುಖಾಂತರ ನೋಂದಾಯಿಸಿಕೊಳ್ಳಬೇಕೆಂಬ ನಿಯಮ ರದ್ದುಪಡಿಸಬೇಕು. ಸ್ಥಳದಲ್ಲಿಯೇ ನೋಂದಾಯಿಸಿಕೊಂಡು ಲಸಿಕೆ ಹಾಕುವುದೇ ಉತ್ತಮ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.