ADVERTISEMENT

ವಿದ್ಯುತ್‌ ಕ್ಷೇತ್ರದ ಖಾಸಗೀಕರಣ ಇಲ್ಲ: ಸುನೀಲ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 19:06 IST
Last Updated 16 ಸೆಪ್ಟೆಂಬರ್ 2021, 19:06 IST
ಸುನಿಲ್ ಕುಮಾರ್
ಸುನಿಲ್ ಕುಮಾರ್   

ಬೆಂಗಳೂರು: ವಿದ್ಯುತ್‌ ಕ್ಷೇತ್ರದ ಖಾಸಗೀಕರಣ ಮಾಡುವ ಪ್ರಸ್ತಾವ ರಾಜ್ಯ ಸರ್ಕಾರದ ಮುಂದೆ ಇಲ್ಲ ಎಂದು ಇಂಧನ ಸಚಿವ ವಿ.ಸುನೀಲ್‌ ಕುಮಾರ್‌ ಸ್ಪಷ್ಟಪಡಿಸಿದರು.

ವಿಧಾನಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಯಶವಂತರಾಯ ಗೌಡ ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ವಿದ್ಯುತ್‌ ಪಂಪ್‌ಸೆಟ್‌ಗಳಿಗೆ ಹಾಗೂ ಗ್ರಾಮೀಣ ಪ್ರದೇಶದ ವಿದ್ಯುತ್‌ ಸಂಪರ್ಕಕ್ಕೆ ಸ್ಮಾರ್ಟ್‌ ಹಾಗೂ ಪ್ರಿಪೇಯ್ಡ್‌ ಮೀಟರ್‌ ಅಳವಡಿ ಸುವ ಪ್ರಸ್ತಾವವೂ ಇಲ್ಲ’ ಎಂದರು.

‘ರಾಜ್ಯದ ಸರ್ಕಾರಿ ಕಚೇರಿಗಳಿಂದ ₹5,792 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಇದೆ. ಇಷ್ಟೊಂದು ಮೊತ್ತ ಬಾಕಿ ಇದ್ದರೆ ಇಲಾಖೆಯ ಸುಧಾರಣೆ ಮಾಡಲು ಸಾಧ್ಯ ಇಲ್ಲ. ಹೀಗಾಗಿ, ಸರ್ಕಾರಿ ಕಚೇರಿಗಳಲ್ಲಿ ಪ್ರೀಪೇಯ್ಡ್‌ ಮೀಟರ್‌ ಅಳವಡಿಕೆ ಮಾಡಲು ಚಿಂತನೆ ನಡೆಸಲಾಗಿದೆ. 27 ಅಮೃತ ನಗರ/ಪಟ್ಟಣಗಳಲ್ಲಿ ಈ ಯೋಜನೆ ಜಾರಿಗೊಳಿಸಲು ಯೋಜಿಸಲಾಗಿದೆ. ತಾತ್ಕಾಲಿಕ ವಿದ್ಯುತ್‌ ಸಂಪರ್ಕಗಳಿಗೆ ಸಹ ಪ್ರೀಪೇಯ್ಡ್‌ ಮೀಟರ್ ಅಳವಡಿಸಲಾಗುವುದು’ ಎಂದು ಅವರು ಹೇಳಿದರು.

ADVERTISEMENT

ಯಶವಂತರಾಯ ಗೌಡ ಪಾಟೀಲ, ‘ವಿದ್ಯುತ್‌ ಕ್ಷೇತ್ರದ ಖಾಸಗೀಕರಣ ನಡೆಯುತ್ತಿದೆ ಎಂದು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಉಚಿತ ವಿದ್ಯುತ್‌ ಇಲ್ಲ ಎಂದು ರೈತರೂ ಭಯಗೊಂಡಿದ್ದಾರೆ. ಸರ್ಕಾರವು ಗೊಂದಲ ನಿವಾರಿಸಬೇಕು’ ಎಂದರು.

ಬಿಜೆಪಿಯ ಅಪ್ಪಚ್ಚು ರಂಜನ್‌, ಜೆಡಿಎಸ್‌ನ ಕೆ.ಎಸ್‌.ಲಿಂಗೇಶ್‌, ‘ಕಾಫಿ ಬೆಳೆಗಾರರ 10 ಎಚ್‌.ಡಿ. ವರೆಗಿನ ವಿದ್ಯುತ್‌ ಪಂಪ್‌ಸೆಟ್‌ಗಳಿಗೆ
ಉಚಿತ ವಿದ್ಯುತ್‌ ನೀಡಬೇಕು’ ಎಂದು ಆಗ್ರಹಿಸಿದರು. ಈ ಬಗ್ಗೆ ಹಣಕಾಸು ಇಲಾಖೆಗೆ ಜತೆಗೆ ಸಮಾಲೋಚನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸುನೀಲ್‌ ಕುಮಾರ್‌ ಹೇಳಿದರು.

ಬಿಜೆಪಿಯ ಜಿ.ಕರುಣಾಕರ ರೆಡ್ಡಿ ಪ್ರಶ್ನೆಗೆ ಉತ್ತರಿಸಿದ ಅವರು, ‘ವಿದ್ಯುತ್‌ ಪರಿವರ್ತಕಗಳು ಹಾಳಾದರೆ 24 ಗಂಟೆಗಳ ಒಳಗೆ ದುರಸ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.