ಬೆಂಗಳೂರು: ‘ಕೌಶಲಾಭಿವೃದ್ಧಿ ಇಲಾಖೆಯಲ್ಲಿ ಶಿಫಾರಸು ಆಧಾರಿತ ವರ್ಗಾವಣೆಯನ್ನು ನಿಲ್ಲಿಸಲಾಗುವುದು. ಕೌನ್ಸೆಲಿಂಗ್ ಆಧಾರದಲ್ಲಿ ಮಾತ್ರ ವರ್ಗಾವಣೆ ಮಾಡಲಾಗುವುದು’ ಎಂದು ಕೌಶಲಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ ಅವರು ಹೇಳಿದರು.
ವಿಕಾಸಸೌಧದಲ್ಲಿ ಶುಕ್ರವಾರ ನಡೆದ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರಭಾವ ಮತ್ತು ಶಿಫಾರಸು ಬಳಸಿ ಮಾಡಿಸಿಕೊಳ್ಳಲಾದ ವರ್ಗಾವಣೆಗಳಿಂದ ಇಲಾಖೆಯ ಕೆಲಸಗಳು ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಈ ಪದ್ಧತಿಗೆ ಕಡಿವಾಣ ಹಾಕಬೇಕಿದೆ. ಸಿಬ್ಬಂದಿಗೆ ಆದ್ಯತೆಯ ಸ್ಥಳಗಳಲ್ಲಿ ಹುದ್ದೆ ಪಡೆಯಲು ಅನುವು ಮಾಡಿಕೊಡುವುದರಿಂದ ಕೆಲಸ ಪರಿಣಾಮಕಾರಿಯಾಗಲಿದೆ’ ಎಂದರು.
‘ಜೂನ್ 16ರ ಒಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಕೌನ್ಸೆಲಿಂಗ್ ಆಧಾರಿತ ವರ್ಗಾವಣೆಗೆ ಅಗತ್ಯ ಮಾರ್ಗಸೂಚಿಗಳನ್ನು ತಕ್ಷಣವೇ ರೂಪಿಸಿ’ ಎಂದು ಇಲಾಖೆಯ ಕಾರ್ಯದರ್ಶಿ ಏಕರೂಪ್ ಕೌರ್ ಅವರಿಗೆ ಸೂಚಿಸಿದರು.
‘ಪದವಿಗಳನ್ನು ಪಡೆದಿದ್ದರೂ ಹಲವರಿಗೆ ಕೌಶಲ್ಯದ ಕೊರತೆಯ ಕಾರಣದಿಂದ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗ ಮೇಳಗಳಲ್ಲಿ ಆದ ನೇಮಕಾತಿಗಳ ದತ್ತಾಂಶ ಮತ್ತು ವರದಿಗಳು ಇದನ್ನೇ ಹೇಳುತ್ತವೆ. ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರದೇ ಇರುವುದೇ ಇದು ಕಾರಣ. ಪದವಿ ಮತ್ತು ಕೌಶಲದ ನಡುವಣ ಈ ಅಂತರವನ್ನು ಇಲ್ಲವಾಗಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರದೇ ಇರುವ ಅಧಿಕಾರಿಗಳನ್ನು ಸಚಿವರು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳಿಗೆ ನೋಟಿಸ್ ನೀಡಿ, ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದರು.
ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ: ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆಗೆ ಪ್ರತ್ಯೇಕ ಸಭೆ ನಡೆಸಿದ ಸಚಿವ ಶರಣಪ್ರಕಾಶ ಪಾಟೀಲ, ‘ವೈದ್ಯಕೀಯ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು ಮತ್ತು ಹಿರಿಯ ನಿವಾಸಿ ಹುದ್ದೆಗಳ ಭರ್ತಿಯನ್ನು ತ್ವರಿತವಾಗಿ ನಡೆಸಬೇಕು’ ಎಂದು ವೈದ್ಯಕೀಯ ಕಾಲೇಜುಗಳ ನಿರ್ದೇಶಕರಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.