ADVERTISEMENT

ಎಸ್‌ಐಟಿಗೆ ವಿರೋಧ: ಕಲಾಪ ಬಲಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 20:15 IST
Last Updated 13 ಫೆಬ್ರುವರಿ 2019, 20:15 IST
   

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ರಾದ್ದಾಂತ ಸೃಷ್ಟಿಸಿರುವ ‘ಆಪರೇಷನ್ ಕಮಲ’ದ ಆಡಿಯೊ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ (ವಿಶೇಷ ತನಿಖಾ ತಂಡ) ಒಪ್ಪಿಸುವ ವಿಚಾರದಲ್ಲಿ ಉಂಟಾಗಿರುವ ಬಿಕ್ಕಟ್ಟು ಬುಧವಾರವೂ ವಿಧಾನಸಭೆ ಕಲಾಪವನ್ನು ಬಲಿ ತೆಗೆದುಕೊಂಡಿತು.

ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸುವ ತಮ್ಮ ನಿರ್ಧಾರದಿಂದ ಹಿಂದೆಸರಿಯಲು ಮೈತ್ರಿ ಸರ್ಕಾರ ನಿರಾಕರಿಸಿದರೆ, ಅದನ್ನು ವಿರೋಧಿಸಿರುವ ಬಿಜೆಪಿ, ಸದನ ಸಮಿತಿ ರಚಿಸಬೇಕು ಎಂದು ಬಿಗಿಪಟ್ಟು ಹಿಡಿದಿದೆ. ಈ ಹಗ್ಗಜಗ್ಗಾಟಕ್ಕೆ ಪರಿಹಾರ ಕಂಡುಕೊಳ್ಳಲು ಕಲಾಪ ಆರಂಭಕ್ಕೂ ಮೊದಲು ಸಭಾಧ್ಯಕ್ಷ ಕೆ.ಆರ್. ರಮೇಶ್‌ ಕುಮಾರ್‌ ನಡೆಸಿದ ಸಂಧಾನ ಸಭೆಯೂ ವಿಫಲವಾಯಿತು.

‘ನೀವು ಕೂಡ ಬಹಳ ಪ್ರಯತ್ನ ಮಾಡಿದ್ದೀರಿ. ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರ್ಕಾರದ ಸಲಹೆ ನೀಡಿದ್ದೀರಿ. ಸದನ ಸಮಿತಿ, ಹಕ್ಕು ಬಾಧ್ಯತಾ ಸಮಿತಿ ಅಥವಾ ಹೈಕೋರ್ಟ್‌ ಹಾಲಿ ನ್ಯಾಯಾಧೀಶರಿಂದ ಪ್ರಕರಣದ ತನಿಖೆ ನಡೆಸಬಹುದು. ಆದರೆ, ಸರ್ಕಾರ ಎಸ್‍ಐಟಿ ತನಿಖೆ ಆಗಬೇಕೆಂದು ಹಟಮಾರಿತನ ತೋರುತ್ತಿದೆ. ಇದನ್ನು ವಿರೋಧಿಸಿ ನಾವು ಅಹೋರಾತ್ರಿ ಧರಣಿ ಕುಳಿತು ಹೋರಾಡುತ್ತೇವೆ’ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಪ್ರಕಟಿಸಿದರು.

ADVERTISEMENT

‘ರಾಜ್ಯದಲ್ಲಿ ಭೀಕರ ಬರಗಾಲವಿದೆ. ಬಜೆಟ್ ಮೇಲೂ ಚರ್ಚೆ ಮಾಡಬೇಕೆಂಬ ಅಪೇಕ್ಷೆ ಇತ್ತು. ಸರ್ಕಾರದ ಹಟಮಾರಿ ವಿರೋಧಿಸಿ ಅನಿವಾರ್ಯವಾಗಿ ಧರಣಿ ಕುಳಿತುಕೊಳ್ಳಬೇಕಾಗಿದೆ ಎಂದೂ ಯಡಿಯೂರಪ್ಪ ಹೇಳಿದರು. ಆ ಬೆನ್ನಲ್ಲೆ ಸಭಾಧ್ಯಕ್ಷರ ಪೀಠದ ಎದುರು ಜಮಾಯಿಸಿದ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಅದಕ್ಕೂ ಮೊದಲ ಮಾತನಾಡಿದ ಬಿಜೆಪಿ ಸದಸ್ಯ ಜೆ.ಸಿ. ಮಾಧುಸ್ವಾಮಿ, ‘ನಾವು 104 ಸದಸ್ಯರಿದ್ದೇವೆ. ಸದನದಲ್ಲಿ ನಿಮ್ಮ ಗೌರವ ಕಾಪಾಡಬೇಕೆಂದು ನಾವು ಸಹಕರಿಸಿದೆವು. ಹೆದರಿಕೊಂಡು ಕುಳಿತಿಲ್ಲ. ನಾವು ಹೇಡಿಗಳಲ್ಲ. ಸಭಾಧ್ಯಕ್ಷರಿಗೆ ಅವಮಾನ ಆಗಬಾರದೆಂಬುದು ನಮ್ಮ ನಿಲುವು. ತಾವೂ ಕೂಡ ಬಹಳ ಪ್ರಯತ್ನ ಮಾಡಿದ್ದೀರಿ. ಆದರೆ, ಸರ್ಕಾ ತನ್ನ ನಿಲುವಿಗೆ ಅಂಟಿಕೊಂಡಿದೆ. ನಾವು ಕೂಡ ಹಿಂದೆ ಸರಿಯುವುದಿಲ್ಲ’ ಎಂದರು.

‘ವಿರೋಧ ಪಕ್ಷವನ್ನು ಬಗ್ಗುಬಡಿಯಲು ಎಸ್ಐಟಿ ಬಳಕೆ ಮಾಡಿಕೊಳ್ಳಲು ಸರ್ಕಾರ ಉದ್ದೇಶಿಸಿದೆ. ಸರ್ಕಾರಿ ಅಧಿಕಾರಿಗಳನ್ನು ಮನಬಂದಂತೆ ಬಳಸಿಕೊಂಡು ವಿರೋಧ ಪಕ್ಷದ ಸದಸ್ಯರಿಗೆ ಬೆದರಿಕೆ ಹಾಕಲು ಮುಂದಾಗಿದೆ. ಇದಕ್ಕೆ ನಾವು ಒಪ್ಪುವುದಿಲ್ಲ’ ಎಂದು ಬಿಜೆಪಿಯ ಕೆ.ಎಸ್. ಈಶ್ವರಪ್ಪ ಏರುಧ್ವನಿಯಲ್ಲಿ ಹೇಳಿದರು.

ಕೋಲಾಹಲ ನಡುವೆ ಮಾತನಾಡಿದ ಸಿದ್ದರಾಮಯ್ಯ, ‘ಸಂವಿಧಾನಬದ್ಧ ಸರ್ಕಾರವನ್ನು ಅಭದ್ರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಶಾಸಕರ ಖರೀದಿ ನಡೆಯುತ್ತಿದೆ. ಜನ ನಮ್ಮನ್ನು ಕೆಟ್ಟ ದೃಷ್ಠಿಯಿಂದ ನೋಡುವಂತಾಗಿದೆ. ನಿಮ್ಮ (ಸಭಾಧ್ಯಕ್ಷರು) ಮೇಲೆಯೇ ಗಂಭೀರ ಆರೋಪ ಬಂದಿದೆ’ ಎಂದರು.

‘ಸದನ ಸಮಿತಿ ಮಾಡಿದರೆ ನ್ಯಾಯ ಹೊರಬರಲ್ಲ. ಇವತ್ತಿನ ಕೆಟ್ಟ ರಾಜಕಾರಣ ನಿಲ್ಲಲ್ಲ. ಎಸ್ ಐಟಿ ತನಿಖೆಯೇ ಆಗಬೇಕು. ಮುಖ್ಯಮಂತ್ರಿ ಕೂಡ ಎಸ್‌ಐಟಿ ತನಿಖೆಗೆ ಹೇಳಿದ್ದಾರೆ. ತಪ್ಪು ಮಾಡಿದವರು ಎಷ್ಟೇ ದೊಡ್ಡವರಾಗಿದ್ದರೂ ಶಿಕ್ಷೆಯಾಗಬೇಕು. ನಿಮ್ಮ ಮೇಲಿನ ಕಳಂಕ ಮರೆಯಾಗಬೇಕು. ಜನರಿಗೆ ಸತ್ಯ ಗೊತ್ತಾಗಲೇ ಬೇಕು’ ಎಂದು ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.