ADVERTISEMENT

ನಾಲ್ಕಾರು ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ: ಬಿಜೆಪಿ ನಾಯಕ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 18:25 IST
Last Updated 7 ಮಾರ್ಚ್ 2023, 18:25 IST
ಬಿ.ಎಸ್‌ ಯಡಿಯೂರಪ್ಪ
ಬಿ.ಎಸ್‌ ಯಡಿಯೂರಪ್ಪ    

ಕಲಬುರಗಿ: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕಾರು ಜನ ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ. ಉಳಿದಂತೆ ಎಲ್ಲ ಶಾಸಕರಿಗೆ ಟಿಕೆಟ್ ನೀಡಲಾಗುವುದು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.

ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಮೊದಲ ಪಟ್ಟಿಯನ್ನು ಶೀಘ್ರ ಬಿಡುಗಡೆ ‌ಮಾಡಲಾಗುವುದು ಎಂದರು.

ಸಚಿವರಾದ ವಿ. ಸೋಮಣ್ಣ, ನಾರಾಯಯಣಗೌಡ ಅವರು ಪಕ್ಷ ಬಿಡುವ ಬಗ್ಗೆ ಮಾಹಿತಿ ಇಲ್ಲ. ಪಕ್ಷದಿಂದ ಹೋಗುವವರು ಹೋಗಬಹುದು. ಬರುವವರು ಬರಬಹುದು ಎಂದರು.

ADVERTISEMENT

ಮಾರ್ಚ್ 25ರಂದು ಸಮಾರೋಪಕ್ಕೆ ಪ್ರಧಾನಿ ಮೋದಿ

ಪ್ರಸ್ತುತ ನಡೆಯುತ್ತಿರುವ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಮಾರ್ಚ್ 25ರಂದು ದಾವಣಗೆರೆಯಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಐದಾರು ಲಕ್ಷ ಜನರು ಸೇರಲಿದ್ದಾರೆ ಎಂದರು.

ಪ್ರತ್ಯೇಕ ಸಚಿವಾಲಯ: ಸಿ.ಎಂ. ಜೊತೆ ಚರ್ಚೆ

ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಘೋಷಣೆ ಮಾಡಿದ್ದೆ. ಅದನ್ನು ಅನುಷ್ಠಾನಕ್ಕೆ ‌ತರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.

ರಾಹುಲ್ ದೇಶದ ಕ್ಷಮೆ ಕೇಳಲಿ

ವಿದೇಶಕ್ಕೆ ತೆರಳಿದ ಸಂದರ್ಭದಲ್ಲಿ ಭಾರತವನ್ನು ಟೀಕಿಸುವುದು ರಾಹುಲ್ ಗಾಂಧಿ ಅವರ ಚಾಳಿಯಾಗಿದೆ. ಅದನ್ನು ತಿದ್ದಿಕೊಳ್ಳಬೇಕು. ಹಾಗೆ ಮಾತನಾಡಿದ್ದರ ಬಗ್ಗೆ ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

140 ಸೀಟು

ರಾಜ್ಯದಾದ್ಯಂತ ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದ್ದು, 140 ಸೀಟುಗಳನ್ನು ಪಡೆದು ಸರ್ಕಾರ ರಚಿಸಲಿದ್ದೇವೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ‌ನಡೆಯಲಿದೆ. ಸ್ಪಷ್ಟ ಬಹುಮತ ಬಂದ ಬಳಿಕ ಶಾಸಕರು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎಂದರು.

ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಜಗದೀಶ್ ಶೆಟ್ಟರ್, ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ‌ಪಾಟೀಲ ರೇವೂರ, ಶಾಸಕ ಸುಭಾಷ್ ಗುತ್ತೇದಾರ, ವಿಧಾನಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.