ADVERTISEMENT

ಯಲ್ಲಮ್ಮನ ಗುಡ್ಡದಲ್ಲೂ ಸಮಸ್ಯೆ

-

​ಪ್ರಜಾವಾಣಿ ವಾರ್ತೆ
Published 18 ಮೇ 2019, 19:13 IST
Last Updated 18 ಮೇ 2019, 19:13 IST
ಕೂಡಲಸಂಗಮದ ಐಕ್ಯಮಂಟಪದ ಪ್ರವೇಶ ಸ್ಥಳದ ನೋಟ (ಸಂಗ್ರಹ ಚಿತ್ರ)
ಕೂಡಲಸಂಗಮದ ಐಕ್ಯಮಂಟಪದ ಪ್ರವೇಶ ಸ್ಥಳದ ನೋಟ (ಸಂಗ್ರಹ ಚಿತ್ರ)   

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದ ರೇಣುಕಾದೇವಿ ದೇವಸ್ಥಾನದಲ್ಲಿ ನೀರಿನ ಕೊರತೆ ಇಲ್ಲ.

ನಾಲ್ಕು ಕಡೆ ಬೋರ್‌ವೆಲ್‌ಗಳನ್ನು ಕೊರೆಯಲಾಗಿದ್ದು, ದೊಡ್ಡ ಪ್ರಮಾಣದ ಟ್ಯಾಂಕ್‌ಗಳಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿದೆ. ಭಕ್ತರು ಸ್ನಾನ ಮಾಡುವ ಪ್ರದೇಶ, ದೇವಸ್ಥಾನದ ಅಕ್ಕ ಪಕ್ಕ, ಊಟಕ್ಕೆ ಕೂರುವ ಸ್ಥಳಗಳಲ್ಲಿ ನಲ್ಲಿ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಸವದತ್ತಿ ರೇಣುಕಾದೇವಿ ದೇವಸ್ಥಾನ ಟ್ರಸ್ಟ್‌ನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ತಿಳಿಸಿದ್ದಾರೆ.

ಕುಡಿಯಲು ತೊಂದರೆ ಇಲ್ಲ, ಬಳಕೆಗೆ ನೀರಿಲ್ಲ: ಕೃಷ್ಣಾ, ಮಲಪ್ರಭಾ ನದಿಗಳು ನೀರಿಲ್ಲದೇ ಬತ್ತಿರುವ ಕಾರಣ ಬಸವಣ್ಣನ ಐಕ್ಯಸ್ಥಳ ಕೂಡಲಸಂಗಮ, ಬಾದಾಮಿಯ ಬನಶಂಕರಿ ದೇಗುಲ, ಚಾಲುಕ್ಯರ ನೆಲೆಗಳಾದ ಬಾದಾಮಿ, ಪಟ್ಟದಕಲ್ಲು, ಐಹೊಳೆಗೆ ಬರುವವರು ನೀರಿನ ತೊಂದರೆ ಎದುರಿಸಬೇಕಾಗಿದೆ.

ADVERTISEMENT

ಈ ತಾಣಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಇಲ್ಲ. ಆದರೆ, ಇಲ್ಲಿಗೆ ಬರುವ ಭಕ್ತರು ಹಾಗೂ ಪ್ರವಾಸಿಗರಿಗೆ ಸ್ನಾನ, ಶೌಚಾದಿ ನಿತ್ಯಕರ್ಮಗಳಿಗೆ ಸಂಕಷ್ಟ ಎದುರಾಗಿದೆ. ಬನಶಂಕರಿ ದೇಗುಲದ ಎದುರಿನ ಹರಿದ್ರಾತೀರ್ಥ ಹೊಂಡ ಬತ್ತಿದೆ.ಬಾದಾಮಿ ಪಟ್ಟಣಕ್ಕೆ 67 ಕೊಳವೆ ಬಾವಿಗಳಿಂದ ಅಲ್ಲಿನ ಪುರಸಭೆ ನೀರುಣಿಸುತ್ತಿದೆ.

ಕೂಡಲಸಂಗಮದ ಐಕ್ಯಮಂಟಪ ಇರುವ ಕೃಷ್ಣೆಯ ಹಿನ್ನೀರು ಖಾಲಿಯಾಗಿದೆ. ಹಾಗಾಗಿ ಅಲ್ಲಿನ ಸ್ನಾನದ ಘಟ್ಟಗಳಲ್ಲಿ ನೀರು ಇಲ್ಲ. ಮಲಪ್ರಭಾ ನದಿ ಬತ್ತಿರುವ ಕಾರಣ ಅದರ ದಂಡೆಯಲ್ಲಿರುವ ಪಟ್ಟದಕಲ್ಲು ಸೇರಿದಂತೆ 34 ಹಳ್ಳಿಗಳಲ್ಲಿ ಹಾಹಾಕಾರ ಉಂಟಾಗಿದೆ.

ಕಡು ಬೇಸಿಗೆಯ ಕಾರಣ ಈ ತಾಣಗಳಿಗೆ ಭೇಟಿ ನೀಡುವ ಯಾತ್ರಿಕರು ಹಾಗೂ ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯ ಇಳಿಕೆ ಕಂಡುಬಂದಿದೆ. ಹಾಗಾಗಿ ಪ್ರವಾಸಿಗರಿಗೆ ನೀರು ಒದಗಿಸುವ ಕಷ್ಟ ದೇವಸ್ಥಾನ ಸಮಿತಿ ಮತ್ತು ಪ್ರವಾಸೋದ್ಯಮ ಇಲಾಖೆಗೆ ಬಾಧಿಸಿಲ್ಲ.

ಸಿದ್ಧಾರೂಢ ಮಠದಲ್ಲಿಲ್ಲ ನೀರಿನ ಸಮಸ್ಯೆ: ಹುಬ್ಬಳ್ಳಿಯ ಸಿದ್ಧಾರೂಢ ಮಠವು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ
ಭಕ್ತ ಸಮೂಹವನ್ನು ಹೊಂದಿದೆ. ನಿತ್ಯ 3 ರಿಂದ 4 ಸಾವಿರ ಭಕ್ತರು ಬರುತ್ತಾರೆ. ಆದರೆ, ಮಠದಲ್ಲಿ ನೀರಿನ ಸಮಸ್ಯೆ ಇಲ್ಲ.

ಹುಬ್ಬಳ್ಳಿಯಲ್ಲಿ ವಾರಕ್ಕೊಮ್ಮೆ ನೀರು ಪೂರೈಕೆಯಾಗುವುದರಿಂದ ಭಕ್ತರಿಗೆ ಮಠದಿಂದಲೇ ಕೊಳವೆಬಾವಿಗಳನ್ನು ಕೊರೆಯಿಸಿ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಭಕ್ತರು ಉಳಿದುಕೊಳ್ಳಲಿರುವ 100 ಕೊಠಡಿಗಳಿಗೆ, ದಾಸೋಹ ವ್ಯವಸ್ಥೆಗೆ ನೀರಿನ ಸಮಸ್ಯೆ ಎದುರಾಗಿಲ್ಲ ಎನ್ನುತ್ತಾರೆ ಮಠದ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಡಿ.ಡಿ. ಮಾಳಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.