ADVERTISEMENT

ಬುಡಕಟ್ಟು ಅಭಿವೃದ್ಧಿ ನಿಗಮ ರಚನೆಗೆ ಅಲೆಮಾರಿ ಒಕ್ಕೂಟ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 6:57 IST
Last Updated 20 ಸೆಪ್ಟೆಂಬರ್ 2020, 6:57 IST
ಸಚಿವ ಆನಂದ್‌ ಸಿಂಗ್‌ ಅವರಿಗೆ ಮನವಿ ಸಲ್ಲಿಕೆ
ಸಚಿವ ಆನಂದ್‌ ಸಿಂಗ್‌ ಅವರಿಗೆ ಮನವಿ ಸಲ್ಲಿಕೆ    

ಹೊಸಪೇಟೆ: ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಆಯೋಗ ಮತ್ತು ಅಭಿವೃದ್ಧಿ ನಿಗಮ ರಚಿಸಬೇಕೆಂದು ಅಲೆಮಾರಿ ಒಕ್ಕೂಟ ಆಗ್ರಹಿಸಿದೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಬರೆದ ಮನವಿ ಪತ್ರವನ್ನು ಒಕ್ಕೂಟದ ಮುಖಂಡರು ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರಿಗೆ ಸಲ್ಲಿಸಿ ಒತ್ತಾಯಿಸಿದರು.

‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಲ್ಲಿ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ವಿವಿಧ ಜನಾಂಗಗಳು ಹಂಚಿ ಹೋಗಿವೆ. 2007ರಲ್ಲಿ ರಾಜ್ಯ ಸರ್ಕಾರ ಅಲೆಮಾರಿ ಪಟ್ಟಿ ಅಧಿಸೂಚನೆ ಹೊರಡಿಸಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದೆ. ಆದರೆ, ಅವುಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬರುತ್ತಿಲ್ಲ’ ಎಂದು ಗೋಳು ತೋಡಿಕೊಂಡಿದ್ದಾರೆ.

ADVERTISEMENT

‘ಬುಡಕಟ್ಟುಗಳ ನಿಮಗ ರಚಿಸಿದರೆ ಈ ಜನಾಂಗದವರ ಸಮಸ್ಯೆಗಳನ್ನು ನೇರವಾಗಿ ಅದರ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಆಯೋಗ ರಚಿಸಿ ಈ ಜನಾಂಗಗಳು ವಾಸ್ತವವಾಗಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವರದಿ ಸಿದ್ಧಪಡಿಸಬೇಕು. ಬಳಿಕ ಆ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಅಲೆಮಾರಿ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಣ್ಣ ಮಾರೆಪ್ಪ, ಉಪಾಧ್ಯಕ್ಷ ಹಕ್ಕಿಪಿಕ್ಕಿ ರಾಮು, ಯುವ ಘಟಕದ ರಾಜ್ಯ ಅಧ್ಯಕ್ಷ ಮಲ್ಲಿಕಾರ್ಜುನ ಮಾನ್ಪಡೆ, ಮುಖಂಡ ಸಿಡಿ ಗರೀಶ್‌, ಮಾರೆಪ್ಪ, ಜೆ. ರಮೇಶ್‌, ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.