ADVERTISEMENT

ಅಲೆಮಾರಿಗಳಿಗೆ ನೆರವು ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 16:22 IST
Last Updated 8 ಜೂನ್ 2021, 16:22 IST

ಬೆಂಗಳೂರು: ಕೋವಿಡ್‌ನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಅಲೆಮಾರಿಗಳು ಮತ್ತು ಅರೆ ಅಲೆಮಾರಿ ಸಮುದಾಯದ ಜನರಿಗೆ ವಿಪತ್ತು ಪರಿಹಾರ ನಿಧಿಯ ಅನುದಾನವನ್ನು ಬಳಸಿಕೊಂಡು ನೆರವು ನೀಡಬೇಕು ಎಂದು ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಯುವಜನ ಘಟಕ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿರುವ ಒಕ್ಕೂಟದ ಯುವಜನ ಘಟಕದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಕೆ.ಜಗದೀಶ್, ‘ಸರ್ಕಾರ ಅಲೆಮಾರಿ ಕೋಶಕ್ಕೆ ಅಗತ್ಯ ಅನುದಾನ ಒದಗಿಸಿ, ಯೋಜನೆಗಳನ್ನು ರೂಪಿಸಿಲ್ಲ. ಇದರಿಂದಾಗಿ ಸಂಕಷ್ಟದ ಸಂದರ್ಭದಲ್ಲಿ ಅಲೆಮಾರಿ ಜನರಿಗೆ ನೆರವು ಸಿಗುತ್ತಿಲ್ಲ. ವಿಪತ್ತು ಪರಿಹಾರ ನಿಧಿಯ ಮೂಲಕವೇ ಈ ಜನರಿಗೆ ನೆರವು ಒದಗಿಸುವ ಕೆಲಸ ಮಾಡಬೇಕು’ ಎಂದು ಬೇಡಿಕೆ ಇಟ್ಟಿದ್ದಾರೆ.

ಅಕಾಲಿಕ ಮಳೆಯಿಂದ ಅಲೆಮಾರಿ ಜನರ ಟೆಂಟ್‌ಗಳಿಗೆ ಹಾನಿಯಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ಜೀವನ ಕಳೆಯುವುದು ಕಷ್ಟವಾಗಿದೆ. ಅವರಿಗೆ ಕಾಯಂ ವಸತಿ ವ್ಯವಸ್ಥೆ ಒದಗಿಸುವವರೆಗೂ ಟೆಂಟ್‌ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಬೇಕು. ಬೇಳೆ, ಕಾಳುಗಳು, ಎಣ್ಣೆ, ಮೆಣಸಿನಪುಡಿ, ಉಪ್ಪು ಸೇರಿದಂತೆ ಎಲ್ಲ ಪಡಿತರ ವಸ್ತುಗಳು ಮತ್ತು ಆಹಾರ ಧಾನ್ಯಗಳುಳ್ಳ ಕಿಟ್‌ ವಿತರಿಸಬೇಕು. ಆರೋಗ್ಯದ ಕುರಿತು ಜಾಗೃತಿ ಮೂಡಿಸಿ ಮಾಸ್ಕ್‌, ಸ್ಯಾನಿಟೈಸರ್‌, ಸೋಪ್‌ ವಿತರಿಸಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.