ADVERTISEMENT

ಅಂಬಾನಿ, ಅದಾನಿಯಲ್ಲ, ಬಡವರ ಕಲ್ಯಾಣವೇ ಬಿಜೆಪಿಯ ಮೊದಲ ಆದ್ಯತೆ: ಸಿ.ಟಿ.ರವಿ

ಬಿಜೆಪಿ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 11:05 IST
Last Updated 6 ಏಪ್ರಿಲ್ 2021, 11:05 IST
   

ಬೆಂಗಳೂರು: ಬಡವರ ಕಲ್ಯಾಣಕ್ಕೆ ಪೂರಕ ಯೋಜನೆಗಳು ಮೋದಿ ಸರ್ಕಾರದ ಆದ್ಯತೆಯೇ ಹೊರತು ಅದಾನಿ, ಅಂಬಾನಿ ಕೇಂದ್ರಿತ ಯೋಜನೆಗಳಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಕೃಷಿ ಸಮ್ಮಾನ್‌, ಜನಧನ್‌, ಉಜ್ವಲಾ ಮತ್ತು ಆಯುಷ್ಮಾನ್‌ ಮುಂತಾದ ಜನಪರ ಯೋಜನೆಗಳ ಮೂಲಕ ಅತಿ ಕಡು ಬಡ ಕುಟುಂಬಗಳು ಸ್ವಾವಲಂಬಿಗಳಾಗಿಸುವ ದಿಸೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಪಕ್ಷದ 41 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜಕೀಯವು ಬದಲಾವಣೆಗೆ ಪೂರಕ ಎಂಬ ಚಿಂತನೆ ನಮ್ಮದು. ಅಧಿಕಾರವೇ ಅಂತಿಮ ಗುರಿಯಲ್ಲ. ದೇಶವನ್ನು ಪರಮ ವೈಭವದತ್ತ ಕೊಂಡೊಯ್ಯುವ ಗುರಿ ನಮ್ಮದು. ಅಭಿವೃದ್ಧಿ ಕಾರ್ಯಕ್ಕೆ ಬಿಡುಗಡೆಯಾದ ₹100 ರಲ್ಲಿ ₹15 ಮಾತ್ರ ಬಳಕೆಯಾಗುತ್ತಿತ್ತು ಎಂದು ಸ್ವತಃ ರಾಜೀವ್‌ಗಾಂಧಿಯವರೇ ಹೇಳಿದ್ದರು. ಈಗ ₹100 ಬಿಡುಗಡೆ ಆದರೆ ₹100 ಕೂಡ ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗ ಆಗುತ್ತದೆ ಎಂದು ಹೇಳಿದರು.

ADVERTISEMENT

ಎರಡು ಅವತಾರಗಳನ್ನು ಪೂರ್ಣಗೊಳಿಸಿ ಮೂರನೇ ಅವತಾರದಲ್ಲಿರುವ ಬಿಜೆಪಿ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಿದೆ. ಅತಿ ಹೆಚ್ಚು ಸಂಸದರು, ಗರಿಷ್ಠ ಕಾರ್ಯಕರ್ತರು, ಅತಿ ಹೆಚ್ಚು ಶಾಸಕರು, ಅತಿ ಹೆಚ್ಚು ಸಂಖ್ಯೆಯ ಪರಿಶಿಷ್ಟ ಜಾತಿ,ಪಂಗಡಗಳ ಹಾಗೂ ಮಹಿಳಾ ಶಾಸಕರನ್ನು ಹೊಂದಿರುವ ಪಕ್ಷವಾಗಿ ಬಿಜೆಪಿ ಬೆಳೆದು ನಿಂತಿದೆ ಎಂದು ರವಿ ಹೇಳಿದರು.

1951 ರಲ್ಲಿ ಜನಸಂಘ ಆರಂಭಗೊಂಡಿತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ನೆಹರೂ ಅವರ ನಿರ್ಧಾರವನ್ನು ಶ್ಯಾಮಪ್ರಸಾದ ಮುಖರ್ಜಿಯವರು ವಿರೋಧಿಸಿದರು. ಅದಕ್ಕಾಗಿ ಹೋರಾಟ ನಡೆಸಿದ ಅವರನ್ನು ಕಾಶ್ಮೀರದಲ್ಲಿ ಜೈಲಿಗೆ ಹಾಕಲಾಯಿತು. ಜೈಲಿನಲ್ಲೇ ಅವರು ಸಾವನ್ನಪ್ಪಿದರು. ಬಳಿಕ ಮತ್ತೊಬ್ಬ ಹಿರಿಯ ಮುಖಂಡ ದೀನದಯಾಳ ಉಪಾಧ್ಯಾಯ ಅವರ ಕಗ್ಗೊಲೆ ನಡೆಯಿತು. ನಾಯಕರ ಸಾವಿನಿಂದ ಕಂಗೆಡದೆ ಪಕ್ಷ ಮುನ್ನಡೆಯಿತು ಎಂದು ಹೇಳಿದರು.

ದೇಶದ ಕಟ್ಟ ಕಡೆಯ ಮನುಷ್ಯನಿಗೆ ನೆರವು ನೀಡುವ ಕಾರ್ಯ ಮಾಡಬೇಕೆಂಬ ದೀನದಯಾಳ ಉಪಾಧ್ಯಾಯರ ಕನಸನ್ನು ನನಸು ಮಾಡುವತ್ತ ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಸರಕಾರಗಳು ಕೆಲಸ ಮಾಡುತ್ತಿವೆ ಎಂದು ಅವರು ತಿಳಿಸಿದರು.

1980 ರಲ್ಲಿ ಮುಂಬೈ ಮಹಾಧಿವೇಶನದಲ್ಲಿ ಬಿಜೆಪಿ ಸ್ಥಾಪನೆಗೊಂಡಿತು. ಆರಂಭಿಕ ದಿನಗಳಲ್ಲಿ ಕನಿಷ್ಠ ಸ್ಥಾನ ಪಡೆದರೂ ಈಗ ಪಕ್ಷವು ಅತಿ ದೊಡ್ಡದಾಗಿ ಬೆಳೆದು ನಿಂತಿದೆ. 370 ನೇ ವಿಧಿ ರದ್ದು ಮಾಡುವ ಮೂಲಕ ಪಕ್ಷವು ಕಾಶ್ಮೀರಕ್ಕೆ ನ್ಯಾಯ ಸಿಗುವಂತೆ ಮಾಡಿದೆ. ಸಿಎಎ ಜಾರಿ ಮೂಲಕ ನಿರಾಶ್ರಿತರಿಗೆ ನ್ಯಾಯ ನೀಡಿದೆ. ರಾಮಮಂದಿರ ನಿರ್ಮಾಣ ಕುರಿತ ನಿರ್ಧಾರದ ಮೂಲಕ ದೇಶ ಸಾಂಸ್ಕೃತಿಕ ಅಸ್ಮಿತೆಗೆ ಗೌರವ ನೀಡುವ ಕೆಲಸ ಮಾಡಿದೆ ಎಂದು ರವಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.