ADVERTISEMENT

ಶಾಲೆಗಳನ್ನು ತೆರೆಯಲು ಇಲ್ಲ ಅವಸರ: ಸಚಿವ ಎಸ್.ಸುರೇಶ್ ಕುಮಾರ್

ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಸಚಿವ ಸುರೇಶ್ ಕುಮಾರ್‌ ಸಂವಾದ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 20:15 IST
Last Updated 28 ಜುಲೈ 2020, 20:15 IST
ಎಸ್. ಸುರೇಶ್‌ ಕುಮಾರ್‌
ಎಸ್. ಸುರೇಶ್‌ ಕುಮಾರ್‌   

ಬೆಂಗಳೂರು: ‘ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ, ಶಾಲೆಗಳನ್ನು ತೆರೆಯುವ ಅವಸರ ಸರ್ಕಾರದ ಮುಂದೆ ಇಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ತಂತ್ರಜ್ಞಾನ ಆಧಾರಿತ ಶಿಕ್ಷಣ ಮತ್ತು ಶಾಲಾ ಚಟುವಟಿಕೆ ಕುರಿತಂತೆ ಶೈಕ್ಷಣಿಕ ಕ್ಷೇತ್ರದ 35ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಸಚಿವರು ಮಂಗಳವಾರ ಸಂವಾದ ನಡೆಸಿದರು.

‘ಶಾಲೆ ತೆರೆಯದಿದ್ದರೂ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಎಲ್ಲ ಆಯಾಮಗಳಿಂದ ಪ್ರಯತ್ನಿಸ ಲಾಗುತ್ತದೆ. ವಠಾರ ಶಾಲೆ, ಪಡಸಾಲೆ ಶಾಲೆ, ಮನೆಶಾಲೆ, ತಂತ್ರಜ್ಞಾನಾಧಾರಿತ ಶಿಕ್ಷಣ, ಆಕಾಶವಾಣಿ, ಚಂದನ ದೂರದರ್ಶನ ವಾಹಿನಿ, ಖಾಸಗಿ ವಾಹಿನಿ, ಶಿಕ್ಷಣ ಇಲಾಖೆಯ ಚಾನೆಲ್ ಸೇರಿದಂತೆ ಲಭ್ಯ ಅವಕಾಶಗಳನ್ನು ಮುಕ್ತವಾಗಿರಿಸಿಕೊಂಡು ಯೋಚಿಸಲಾಗುತ್ತಿದೆ’ ಎಂದರು.

ADVERTISEMENT

‌‘ಸದ್ಯದ ಸ್ಥಿತಿಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಯೂ ಟ್ಯೂಬ್, ವಾಟ್ಸ್ಆ್ಯಪ್‌, ನೇರ ಪ್ರಸಾರ, ಮುದ್ರಿತ ಪಾಠದ ಮಾದರಿ ಸೇರಿದಂತೆ ಎಲ್ಲ ಸಾಧ್ಯತೆಗಳನ್ನು ಕ್ರೋಡೀಕರಿಸಿಕೊಂಡು ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಸರ್ಕಾರ ಮುಂದಾಗಬೇಕು’ ಎಂದು ಸಂವಾದದಲ್ಲಿ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಸಲಹೆ ನೀಡಿದರು.

‘ತಜ್ಞರ ಅಭಿಪ್ರಾಯ ಏನೇ ಇದ್ದರೂ, ಮಕ್ಕಳ ಹಿತದೃಷ್ಟಿಯಿಂದ ಕಲಿಕಾ ಚಟುವಟಿಕೆ ಆರಂಭಿಸುವುದು ಒಳ್ಳೆಯದು. ಹೆಚ್ಚು ದಿನ ಶಿಕ್ಷಣದಿಂದ ವಿಮುಖವಾಗುವುದು ಉಚಿತವಲ್ಲ. ತಂತ್ರಜ್ಞಾನಾಧಾರಿತ ಶಿಕ್ಷಣ ನೀಡುವಾಗ ಅದು ಮಕ್ಕಳಿಗೆ ಸಮರ್ಪಕವಾಗಿ ಗಿ ತಲುಪುತ್ತಿದೆಯೇ ಎಂಬುದರ ಬಗ್ಗೆಯೂ ನಿಗಾ ಇಡಬೇಕು’ ಎಂದೂ ಪ್ರತಿನಿಧಿಗಳು ಸಲಹೆ ನೀಡಿದರು.

ಅಜೀಂ ಪ್ರೇಮ್‍ಜಿ ಪ್ರತಿಷ್ಠಾನ, ಗ್ರಾಮ್ಸ್, ಅಕ್ಷರ ಫೌಂಡೇಷನ್, ಯೂನಿಸೆಫ್, ಶಿಕ್ಷಣ, ಸಿಇಇ (ವಾಷ್ ಪ್ರೋಗ್ರಾಂ), ಪೋರ್ತ್ ಫೌಂಡೇಷನ್, ಪ್ರಥಮ್, ಪ್ರಜಾಯತ್ನ, ಅಗಸ್ತ್ಯ ಫೌಂಡೇಷನ್, ಲೆಂಡ್ ಎ ಹ್ಯಾಂಡ್ ಇಂಡಿಯಾ, ವೈಟ್‍ಫೀಲ್ಡ್ ರೆಡಿ, ಸಮೃದ್ಧಿ ಟ್ರಸ್ಟ್, ಇಂಡಿಯನ್ ಲಿಟ್ರೆಸಿ ಪ್ರಾಜೆಕ್ಟ್, ಬಿಜಿವಿಎಸ್, ಎಸ್‍ಟಿಐಆರ್, ಏಕ್ ಸ್ಟೆಪ್-ದೀಕ್ಷಾ, ರೂಂ ಟು ರೀಡ್ ಇಂಡಿಯಾ ಟ್ರಸ್ಟ್, ಗ್ರಾಮ್,
ಐ.ಎಲ್.ಪಿ. ಮತ್ತಿತರ ಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಣ ತಜ್ಞರಾದ ಎಂ.ಕೆ. ಶ್ರೀಧರ್, ಡಾ. ಗುರುರಾಜ ಕರಜಗಿ, ಡಾ.ವಿ.ಪಿ. ನಿರಂಜನಾರಾಧ್ಯ ಸಂವಾದದಲ್ಲಿ ಭಾಗವಹಿಸಿದರು.

ಎಲ್ಲ ಸಲಹೆಗಳನ್ನು ಕ್ರೋಡೀಕರಿಸಿ, ಆಯಾ ಸಂದರ್ಭ, ಆಯಾ ಪ್ರದೇಶಕ್ಕೆ ಅನುಗುಣವಾಗಿ ಜಾರಿಗೆ ತರುವ ಬಗ್ಗೆ ಚಿಂತಿಸಲಾಗುವುದು
-ಎಸ್. ಸುರೇಶ್‍ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.