ADVERTISEMENT

ಶುಲ್ಕ ಹೆಚ್ಚಿಸದಂತೆ ಸಚಿವರ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 12:34 IST
Last Updated 2 ಜೂನ್ 2020, 12:34 IST

ಧಾರವಾಡ: ‘ಕೋವಿಡ್‌–19 ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ಎಲ್ಲ ವರ್ಗದ ಜನಸಾಮಾನ್ಯರಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಮಾನವೀಯತೆ ದೃಷ್ಟಿಯಿಂದ ಈ ವರ್ಷ ಶಾಲಾ ಕಾಲೇಜುಗಳ ಶುಲ್ಕ ಹೆಚ್ಚಿಸದಂತೆ ಸೂಚನೆ ನೀಡಲಾಗಿದೆ’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ ಕುಮಾರ್‌ ತಿಳಿಸಿದರು.

‘ಶುಲ್ಕ ತುಂಬಲು ಸಾಧ್ಯ ಇರುವವರಿಂದ ಮಾತ್ರ ಹಣ ಪಡೆಯಬೇಕು. ಪಡೆದ ಹಣವನ್ನು ಶಿಕ್ಷಕರ ಸಂಬಳಕ್ಕೆ ಸದುಪಯೋಗಪಡಿಸಿಕೊಳ್ಳಬೇಕು. ಒಂದೊಮ್ಮೆ ಶುಲ್ಕ ಭರಿಸಲು ಒತ್ತಾಯಿಸಿದಲ್ಲಿ ಪ್ರತಿ ಬಿಇಒ ಕಚೇರಿಯಲ್ಲಿ ತೆರೆಯಲಾದ ಸಹಾಯವಾಣಿಗೆ ದೂರು ಸಲ್ಲಿಸಬಹುದು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಮೂಲಕ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಶುಲ್ಕ ಪಾವತಿಸುವಂತೆ ಅನೇಕ ಶಾಲೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಕಳೆದ ಎರಡು ವರ್ಷಗಳಿಂದ ಸರ್ಕಾರ ₹1040 ಕೋಟಿ ಶುಲ್ಕವನ್ನು ಖಾಸಗಿ ಶಾಲೆಗಳಿಗೆ ಮರುಪಾವತಿಸಬೇಕಾಗಿದೆ. ಈ ವಿಷಯವನ್ನು ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಮೊದಲ ಕಂತಿನ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ’ ಎಂದು ಸುರೇಶ ಕುಮಾರ್‌ ಹೇಳಿದರು.

ADVERTISEMENT

‘2015ರಲ್ಲಿ ಪದವಿ ಪೂರ್ವ ಕಾಲೇಜು ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಲಾಗಿದ್ದು, ತದನಂತರ ನಡೆದ ಪರೀಕ್ಷೆಯ ಫಲಿತಾಂಶ 2019ರ ಜೂನ್‌ನಲ್ಲಿ ಪ್ರಕಟವಾಗಿದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಇನ್ನೂ ನೇಮಕಾತಿ ಪತ್ರ ನೀಡಲಾಗಿಲ್ಲ. ಅಭ್ಯರ್ಥಿಗಳ ಪ್ರಮಾಣಪತ್ರ ದಾಖಲೀಕರಣ ಈಗ ಚುರುಕುಗೊಂಡಿದ್ದು, ಜೂನ್‌ 18ರಿಂದ ಕೌನ್ಸಲಿಂಗ್‌ ಪ್ರಾರಂಭವಾಗಲಿದೆ’ ಎಂದರು.‌

‘ಕೆಲ ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ಆರಂಭಿಸಿದ್ದು, ಅನೇಕ ಪಾಲಕರು ತಮ್ಮ ಮಕ್ಕಳ ಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ. ಸರ್ಕಾರವು ನಿಮ್ಹಾನ್ಸ್‌ ನಿರ್ದೇಶಕರ ಸಲಹೆ ಪಡೆದಿದ್ದು, ಆರು ವರ್ಷದ ಒಳಗಿನ ಮಕ್ಕಳಿಗೆ ಆನ್‌ಲೈನ್‌ ತರಗತಿಗಳು ಬೇಡ ಎಂಬ ಸಲಹೆ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ಶಿಕ್ಷಣ ಇಲಾಖೆ ಆನ್‌ಲೈನ್‌ ತರಗತಿಗಳ ಬಗ್ಗೆ ಮಾರ್ಗಸೂಚಿ ಪ್ರಕಟಿಸಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.