ADVERTISEMENT

ಯತ್ನಾಳಗೆ ನೋಟಿಸ್‌ ನೀಡಲಾಗಿದೆ: ನಳಿನ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 16:15 IST
Last Updated 21 ಜನವರಿ 2023, 16:15 IST
ನಳಿನ್‌ ಕುಮಾರ್‌ ಕಟೀಲ್‌
ನಳಿನ್‌ ಕುಮಾರ್‌ ಕಟೀಲ್‌    

ಬೆಂಗಳೂರು: ‘ಪಕ್ಷದ ಶಿಸ್ತು ಉಲ್ಲಂಘಿಸಿರುವ ಆರೋಪದ ಮೇಲೆ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ನೋಟಿಸ್‌ ಜಾರಿ ಮಾಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಯತ್ನಾಳ ವಿರುದ್ಧದ ದೂರಿನ ಕುರಿತು ಪಕ್ಷದ ಕೇಂದ್ರೀಯ ಶಿಸ್ತುಸಮಿತಿ ಪರಿಶೀಲನೆ ನಡೆಸುತ್ತಿದೆ. ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸಮಿತಿಯು ಶಾಸಕರಿಗೆ ನೋಟಿಸ್‌ ಜಾರಿ ಮಾಡಿದೆ. ಅವರು ನೀಡುವ ವಿವರಣೆಯನ್ನು ಆಧರಿಸಿ ಸಮಿತಿಯು ಸೂಕ್ತ ತೀರ್ಮಾನ ಕೈಗೊಳ್ಳಲಿದೆ’ ಎಂದರು.

ಯತ್ನಾಳ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಕೆಲವು ದಿನಗಳ ಹಿಂದೆ ಬಹಿರಂಗವಾಗಿ ಟೀಕಿಸಿದ್ದರು. ಸಚಿವ ಮುರುಗೇಶ ನಿರಾಣಿ ಅವರನ್ನು ಕೀಳುಮಟ್ಟದ ಪದಗಳಿಂದ ನಿಂದಿಸಿದ್ದರು. ಈ ಕುರಿತು ಬಿಜೆಪಿ ಕೇಂದ್ರೀಯ ಶಿಸ್ತುಸಮಿತಿ ವಿಚಾರಣೆ ನಡೆಸುತ್ತಿದೆ.

ADVERTISEMENT

ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರನ್ನು ಟೀಕಿಸಿರುವುದಕ್ಕೆ ಆ ಪಕ್ಷದ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಪ್ರಶ್ನಿಸಿದಾಗ, ‘ನಾನು ಶುಕ್ರವಾರದ ಭಾಷಣದಲ್ಲಿ ಯಾವುದೇ ಪಕ್ಷದ ಹೆಸರನ್ನು ಉಲ್ಲೇಖಿಸಿ ಮಾತನಾಡಿಲ್ಲ. ಬಿಜೆಪಿ ಶಿಸ್ತಿನ ಪಕ್ಷ ಎಂದಷ್ಟೇ ಹೇಳಿದ್ದೇನೆ. ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ’ ಎಂದು ಕಟೀಲ್‌ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.