ADVERTISEMENT

ಚಮ್ಮಾರರಿಗೆ ಯೋಜನೆ ತಲುಪಿಸಲು ಸೂಚನೆ

‘ಪ್ರಜಾವಾಣಿ‘ ವರದಿಗೆ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 21:23 IST
Last Updated 16 ಜೂನ್ 2020, 21:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಚಮ್ಮಾರ ವೃತ್ತಿಯಲ್ಲಿ ತೊಡಗಿರುವವರಿಗೆ ಡಾ.ಬಾಬು ಜಗಜೀವನ ರಾಂ‌ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ (ಲಿಡ್ಕರ್‌) ವತಿಯಿಂದ ಇರುವ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕೂಡಲೇ ಕ್ರಮಕೈಗೊಳ್ಳುವಂತೆ ಜಿಲ್ಲಾ ಸಂಯೋಜಕರಿಗೆ ನಿರ್ದೇಶಿಸಲಾಗಿದೆ ಎಂದು ಲಿಡ್ಕರ್ ತಿಳಿಸಿದೆ.

'ಪ್ರಜಾವಾಣಿ'ಯಲ್ಲಿ ಜೂ.14ರಂದು ಭಾನುವಾರದ ಪುರವಣಿಯಲ್ಲಿ ಪ್ರಕಟವಾದ 'ಚಮ್ಮಾರರ ಗೋಳು ಕೇಳುವವರಾರು?' ವರದಿಗೆ ನಿಗಮ ಪ್ರತಿಕ್ರಿಯಿಸಿದೆ.

ಪರಿಶಿಷ್ಟ ಜಾತಿಯಲ್ಲಿ (ಎಸ್‍ಸಿ) ಬರುವ ಮಾದಿಗ, ಮೋಚಿ, ಡೋರ, ಸಮಗಾರ ಹಾಗೂ ಇನ್ನಿತರ ಜಾತಿಗಳು ಚಮ್ಮಾರ ಕರಕುಶಲ ವೃತ್ತಿಯಲ್ಲಿ ತೊಡಗಿವೆ. ರಾಜ್ಯ ಸರ್ಕಾರವು ಲಿಡ್ಕರ್‌ ಮೂಲಕ ಚರ್ಮ ಕುಶಲಕರ್ಮಿಗಳ ಸರ್ವತೋಮುಖ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ತಿಳಿಸಿದೆ.

ADVERTISEMENT

ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಸರ್ಕಾರ ಘೋಷಿಸಿದ ₹5.89 ಕೋಟಿ ವಿಶೇಷ ಪ್ಯಾಕೇಜ್‍ನಿಂದ 11,772 ಚರ್ಮ ಕುಶಲಕರ್ಮಿಗಳಿಗೆ ತಲಾ ₹5 ಸಾವಿರ ಪರಿಹಾರ ಧನ ನೀಡಲಾಗಿದೆ. 2020-21ನೇ ಸಾಲಿಗೆ ಸರ್ಕಾರ ₹40 ಕೋಟಿ ಅನುದಾನ ಹಂಚಿಕೆ ಮಾಡಿದೆ. ಸ್ವಯಂ ಉದ್ಯೋಗ ಯೋಜನೆಯಡಿ ‘ಸ್ವಾವಲಂಬಿ’ ಮಾರಾಟ ಮಳಿಗೆ, ಸಂಚಾರಿ ಮಾರಾಟ ಮಳಿಗೆ ಪ್ರಾರಂಭಿಸಲು ಹಾಗೂ ‘ದುಡಿಮೆ ಬಂಡವಾಳ’ ಸಾಲ ಯೋಜನೆಯಡಿ 2020ರ ಮಾರ್ಚ್ ಅಂತ್ಯದ ವೇಳೆಗೆ 240 ಫಲಾನುಭವಿಗಳಿಗೆ ₹7.98 ಕೋಟಿ ಹಣಕಾಸು ಸೌಲಭ್ಯ ವಿತರಿಸಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.