ADVERTISEMENT

ನಾನು ಎಲ್ಲಿ ಸ್ಪರ್ಧಿಸುತ್ತೇನೆ ಎಂದು ಈಗಲೇ ಹೇಳುವುದು ಅಪ್ರಸ್ತುತ: ಸಿದ್ದರಾಮಯ್ಯ

ಬಾದಾಮಿ ಕ್ಷೆತ್ರದ ಕಾರ್ಯಕರ್ತರಲ್ಲಿ ಗೊಂದಲ ಇಲ್ಲ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 13:41 IST
Last Updated 10 ಡಿಸೆಂಬರ್ 2021, 13:41 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬಾಗಲಕೋಟೆ: ’ವಿಧಾನಸಭೆ ಚುನಾವಣೆ ಇನ್ನೂ ಒಂದು ಕಾಲು ವರ್ಷ ಇದೆ. ಹೀಗಾಗಿ ನಾನು ಎಲ್ಲಿ ಸ್ಪರ್ಧಿಸುತ್ತೇನೆ ಎಂದು ಈಗಲೇ ಹೇಳುವುದು ಅಪ್ರಸ್ತುತ. ಬಾದಾಮಿ ಕ್ಷೇತ್ರದ ಕಾರ್ಯಕರ್ತರಲ್ಲೂ ಆ ಬಗ್ಗೆ ಯಾವುದೇ ಗೊಂದಲ ಇಲ್ಲ‘ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬಾದಾಮಿಯಲ್ಲಿ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ’ಚುನಾವಣೆಗೆ ಎಲ್ಲಿ ನಿಲ್ಲೋದು. ಹೇಗೆ ನಿಲ್ಲೋದು ಎಂದು ಈಗಲೇ ಚರ್ಚಿಸೋದು ಸರಿಯಲ್ಲ. ನನಗೆ ರಾಜ್ಯದ 10ರಿಂದ 15 ಕ್ಷೇತ್ರಗಳಲ್ಲಿ ಕರೆಯುತ್ತಿದ್ದಾರೆ. ಎಲೆಕ್ಷನ್ ಎರಡು ತಿಂಗಳು ಇರುವಾಗ ತೀರ್ಮಾನ ಮಾಡುತ್ತೇನೆ. ಆ ಬಗ್ಗೆ ಹೈಕಮಾಂಡ್‌ನವರು ಕೂಡ ತೀರ್ಮಾನಿಸುತ್ತಾರೆ. ಈಗಲೇ ಎಲ್ಲಿ ನಿಂತುಕೊಳ್ಳುತ್ತೇನೆ ಎಂದು ಹೇಳುವುದಾ?‘ ಎಂದು ಮರುಪ್ರಶ್ನಿಸಿದರು.

’ಸದ್ಯ ಈಗ ನಾನು ಬಾದಾಮಿ ಶಾಸಕ. 2023ರ ಮೇ ತಿಂಗಳವರೆಗೂ ಶಾಸಕನಾಗಿ ಕ್ಷೇತ್ರದ ಜನ ಆಯ್ಕೆ ಮಾಡಿದ್ದಾರೆ. ಜನರ ಕೆಲಸ ಮಾಡುವುದು ಅಷ್ಟೇ ನನ್ನ ಕೆಲಸ‘ ಎಂದರು.

ADVERTISEMENT

’ಕಾಂಗ್ರೆಸ್‌ ಪಕ್ಷ ಒಂದರಲ್ಲಿ ಮಾತ್ರ ಆಂತರಿಕ ಪ್ರಜಾಪ್ರಭುತ್ವ ಇದೆ. ಬೇರೆ ಪಕ್ಷಗಳಲ್ಲಿ ಇಲ್ಲ. ಪಕ್ಷದ ವೇದಿಕೆಯಲ್ಲಿ ಯಾರು ಬೇಕಾದರೂ ಮಾತನಾಡಬಹುದು. ಹೀಗಾಗಿ ಚಿಮ್ಮನಕಟ್ಟಿ ಮಾತಾಡಿದ್ದಾರೆ. ಅವರ ಮಾತಿನ ಬಗ್ಗೆ ಪ್ರತಿಕ್ರಿಯಿಸಲು ಹೋಗೊಲ್ಲ‘ ಎಂದು ಪುನರುಚ್ಚರಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಬೆಳೆಹಾನಿ, ಭ್ರಷ್ಟಾಚಾರ, ಕೃಷ್ಣಾ ಮೇಲ್ದಂಡೆ ಯೋಜನೆ, ಮಹಾದಾಯಿ, ಬಿಟ್ ಕಾಯಿನ್, ಕಾಮಗಾರಿಗಳಲ್ಲಿ ಶೇ 40ರಷ್ಟು ಲಂಚದ ಬಗ್ಗೆ ಚರ್ಚಿಸುತ್ತೇವೆ. ಮತಾಂತರ ನಿಷೇಧ ಕಾಯ್ದೆಯನ್ನು ಬಹಳ ಪ್ರಬಲವಾಗಿ ವಿರೋಧಿಸಲಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.