ADVERTISEMENT

ನೀರಿಂಗಿಸಲು ನೆರವಾದ ನರೇಗಾ ಯೋಜನೆ

ಮುಂದಿನ ಮುಂಗಾರಿನ ಪ್ರತಿ ಹನಿಯನ್ನೂ ಹಿಡಿದಿಟ್ಟುಕೊಳ್ಳಲು ಸಜ್ಜು

ಸಂಧ್ಯಾ ಹೆಗಡೆ
Published 27 ಅಕ್ಟೋಬರ್ 2018, 20:15 IST
Last Updated 27 ಅಕ್ಟೋಬರ್ 2018, 20:15 IST
ಶಿರಸಿಯ ನಾರಾಯಣಗುರು ನಗರದ ನಿವಾಸಿಯೊಬ್ಬರು ನಿರ್ಮಿಸಿಕೊಂಡಿರುವ ಇಂಗುಗುಂಡಿ (ಬಲದಲ್ಲಿರುವವರು ಚಂದ್ರು ದೇವಾಡಿಗ)
ಶಿರಸಿಯ ನಾರಾಯಣಗುರು ನಗರದ ನಿವಾಸಿಯೊಬ್ಬರು ನಿರ್ಮಿಸಿಕೊಂಡಿರುವ ಇಂಗುಗುಂಡಿ (ಬಲದಲ್ಲಿರುವವರು ಚಂದ್ರು ದೇವಾಡಿಗ)   

ಶಿರಸಿ: ಮಳೆಯ ಅಬ್ಬರ ಮುಗಿದಿದೆ. ಈಗ ಭೂಮಿಯಲ್ಲಿನ ತೇವವೂ ಕಡಿಮೆಯಾಗುತ್ತಿದೆ. ಆದರೆ, ಹಳ್ಳಿ ಮನೆಯಂಗಳದಲ್ಲಿ ಇಂಗುಗುಂಡಿ ತೆಗೆಯುವ ತವಕ ಜೋರಾಗುತ್ತಿದೆ. ಮುಂದಿನ ಮುಂಗಾರಿನ ಪ್ರತಿ ಹನಿಯನ್ನೂ ಹಿಡಿದಿಟ್ಟುಕೊಳ್ಳುವ ಯೋಜನೆ ಸದ್ದಿಲ್ಲದೇ ನಡೆಯುತ್ತಿದೆ.

ತಾಲ್ಲೂಕಿನ 32 ಗ್ರಾಮ ಪಂಚಾಯ್ತಿಗಳಲ್ಲಿ ಮೂರು ಪಂಚಾಯ್ತಿಗಳನ್ನು ಹೊರತುಪಡಿಸಿ, ಇನ್ನುಳಿದೆಡೆಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಇಂಗುಗುಂಡಿ ನಿರ್ಮಾಣ ಪ್ರಾರಂಭವಾಗಿದೆ. ಈಗಾಗಲೇ 100ಕ್ಕೂ ಹೆಚ್ಚು ಕಡೆಗಳಲ್ಲಿ ಗುಂಡಿ ತೆಗೆಯುವ ಕಾರ್ಯದಲ್ಲಿ ಕಾರ್ಮಿಕರು ನಿರತರಾಗಿದ್ದಾರೆ.

ಜಲಜಾಗೃತಿ ಕಾರ್ಯವನ್ನು ತಪಸ್ಸಿನಂತೆ ಮಾಡುತ್ತಿರುವ ಇಲ್ಲಿನ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ ಅವರು ಈ ಕಾರ್ಯದ ಮೂಲ ಪ್ರೇರಕರು. ಸತತ ಪರಿಶ್ರಮದಿಂದ ನರೇಗಾದಲ್ಲಿ ಮನೆಯಂಗಳದಲ್ಲಿ ಇಂಗುಗುಂಡಿ ನಿರ್ಮಿಸಿಕೊಳ್ಳಲು 8 ತಿಂಗಳ ಹಿಂದೆ, ಸರ್ಕಾರದಿಂದ ಅನುಮತಿ ಪಡೆಯಲು ಯಶಸ್ವಿಯಾಗಿದ್ದ ಅವರು, ಪಟ್ಟುಹಿಡಿದು ಕೆಲಸ ಮಾಡುತ್ತಿದ್ದಾರೆ. ಪ್ರತಿ ಪಂಚಾಯ್ತಿಯಲ್ಲಿ ಸಭೆ ನಡೆಸಿ, ಮಳೆ ನೀರು ಇಂಗಿಸುವಂತೆ ಅವರು ಮಾಡುವ ಮನವಿಗೆ, ಹಳ್ಳಿಗರು ಸ್ಪಂದಿಸಿದ್ದಾರೆ.

ADVERTISEMENT

‘ಪಂಚಾಯ್ತಿಗಳಲ್ಲಿ ಇರುವ ಮನೆಗಳ ಸಂಖ್ಯೆ ಯಾದಿಯನ್ನು ಸಂಗ್ರಹಿಸಿ, ಜಿಲ್ಲಾ ಪಂಚಾಯ್ತಿ ಮೂಲಕ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವಕ್ಕೆ ಅನುಮೋದನೆ ದೊರೆತಿದೆ. ಪ್ರಸ್ತುತ 177 ಕಾಮಗಾರಿಗಳಿಗೆ ಆದೇಶ ಪತ್ರ ನೀಡಲಾಗಿದೆ. ಇನ್ನು ಒಂದೆರಡು ತಿಂಗಳುಗಳಲ್ಲಿ ಈ ಕಾರ್ಯಕ್ರಮ ಇನ್ನಷ್ಟು ವೇಗ ಪಡೆದುಕೊಳ್ಳುತ್ತದೆ. ಬರುವ ಮಳೆಗಾಲದ ಒಳಗಾಗಿ ಎಲ್ಲ ಪಂಚಾಯ್ತಿ ವ್ಯಾಪ್ತಿಯ ಮನೆಗಳಲ್ಲಿ ಇಂಗುಗುಂಡಿ ನಿರ್ಮಾಣ
ವಾಗಲಿದೆ’ ಎಂದು ಹೇಳುತ್ತಾರೆ ಚಂದ್ರು ದೇವಾಡಿಗ.

‘ಎರಡು ತಿಂಗಳಲ್ಲಿ 18 ಪಂಚಾಯ್ತಿಗಳಲ್ಲಿ ಒಟ್ಟು 40 ಜಲಜಾಗೃತಿ ಕಾರ್ಯಕ್ರಮ ನಡೆಸಿದ್ದೇನೆ. ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಜನರಿಗೆ ತಿಳಿಸಿದ್ದೇನೆ. ನೀರಿಂಗಿಸುವ ಕುರಿತಂತೆ ಸಾವಿರ ಜನರಿಗೆ ನೀಡಿದ್ದ ಪ್ರತಿಜ್ಞಾ ಪತ್ರದಲ್ಲಿ, 663 ಜನರು ಪ್ರತಿಜ್ಞಾ ಪತ್ರಕ್ಕೆ ಸಹಿ ಹಾಕಿ ವಾಪಸ್ ನೀಡಿದ್ದಾರೆ. ಅವರಿಗೆಲ್ಲ ಕರೆ ಮಾಡಿ, ಇಂಗುಗುಂಡಿ ನಿರ್ಮಿಸಿಕೊಳ್ಳುವಂತೆ ನೆನಪಿಸುತ್ತಿದ್ದೇನೆ. 139 ಶಿಕ್ಷಕರು ಪ್ರತಿಜ್ಞಾ ಪತ್ರಕ್ಕೆ ಸಹಿ ಹಾಕಿ, ಶಾಲೆ ಮತ್ತು ಮನೆಗಳಲ್ಲಿ ನೀರಿಂಗಿಸುವ ವ್ಯವಸ್ಥೆ ಅಳವಡಿಸಿಕೊಳ್ಳಲು ಒಪ್ಪಿದ್ದಾರೆ. ಸಾವಿರ ಜನರಿಗೆ ರಕ್ಷಾ ಬಂಧನ ಸಂದೇಶದ ಜತೆಗೆ ಜಲಜಾಗೃತಿಯ ಸಂದೇಶ ತಲುಪಿಸಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು ಸಭೆ ನಡೆಸಿದ್ದ ಎರಡು ದೇವಾಲಯದವರು ಇಡೀ ಕಟ್ಟಡಕ್ಕೆ ಜಲಮರುಪೂರಣ ವ್ಯವಸ್ಥೆ ಅಳವಡಿಸಿದ್ದಾರೆ. ಎರಡು ಗ್ರಾಮಗಳು ಸಂಪೂರ್ಣ ನೀರಿಂಗಿಸುವ ಗ್ರಾಮಗಳಾಗಿ ಪರಿವರ್ತಿತಗೊಳ್ಳುವ ಹಾದಿಯಲ್ಲಿವೆ. ನಗರಕ್ಕೆ ಸನಿಹದಲ್ಲಿರುವ ನಾರಾಯಣಗುರು ನಗರದಲ್ಲಿ 32 ಮನೆಗಳಲ್ಲಿ ಎಲ್ಲರೂ ಸ್ವಂತ ಖರ್ಚಿನಿಂದ ಇಂಗುಗುಂಡಿ ನಿರ್ಮಿಸಿಕೊಂಡಿದ್ದಾರೆ’ ಎಂದು ಅವರು ಅಭಿಯಾನದ ಯಶಸ್ಸನ್ನು ಹಂಚಿಕೊಂಡರು.

ಅನುಷ್ಠಾನ ಹೇಗೆ?

ಜಿಲ್ಲಾ ಪಂಚಾಯ್ತಿ ಅಂದಾಜು ವೆಚ್ಚದಂತೆ ಪ‍್ರತಿ ಮನೆಯ ಇಂಗುಗುಂಡಿಗೆ ₹17,162 ನಿಗದಿಯಾಗಿದೆ. ಮನೆಯ ಚಾವಣಿ ಸುತ್ತ ಹರಣಿ ಹಾಕಿ, ಅದಕ್ಕೆ ಪೈಪ್ ಜೋಡಿಸಲಾಗುತ್ತದೆ. ಬಾವಿ ಪಕ್ಕದಲ್ಲಿ ಐದು ಅಡಿ ಆಳದ ಗುಂಡಿ ತೆಗೆದು ನಿರ್ದಿಷ್ಟ ಪ್ರಮಾಣದ ಜೆಲ್ಲಿ, ಮರಳು, ಅಗತ್ಯ ಸಾಮಗ್ರಿಗಳನ್ನು ತುಂಬಲಾಗುತ್ತದೆ.

****

ನೀರಿನ ವಿಷಯ ಮಾತನಾಡಿದರೆ ಜನರು ಆಲಿಸುತ್ತಾರೆ. ಜನರಲ್ಲಿ ನೀರಿನ ಮಹತ್ವದ ಅರಿವು ಮೂಡಿದೆ.

– ಚಂದ್ರು ದೇವಾಡಿಗ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.