ADVERTISEMENT

ನರ್ಸಿಂಗ್ ಕಾಲೇಜು ಲೋಪ: ತನಿಖೆಗೆ ಜಂಟಿ ಸದನ ಸಮಿತಿ

ಬಿಜೆಪಿಯ ರವಿಕುಮಾರ್ ಪ‍್ರಸ್ತಾವ: ಜೆಡಿಎಸ್‌ ಹೋರಾಟ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 20:20 IST
Last Updated 22 ಮಾರ್ಚ್ 2021, 20:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿರುವ ಎಲ್ಲ ನರ್ಸಿಂಗ್‌ ಮತ್ತು ಅರೆ ವೈದ್ಯಕೀಯ ಕಾಲೇಜುಗಳಲ್ಲಿನ ಲೋಪದೋಷಗಳ ತನಿಖೆಗೆ ಜಂಟಿ ಸದನ ಸಮಿತಿ ರಚಿಸಲು ಸರ್ಕಾರ ಸಮ್ಮತಿಸಿದೆ. ಆ ಮೂಲಕ, ಜೆಡಿಎಸ್‌ ಸದಸ್ಯರ ಪಟ್ಟಿಗೆ ಮಣಿದಿದೆ.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಎನ್. ರವಿಕುಮಾರ್‌ ಕಳೆದ ಗುರುವಾರ ಮಂಡಿಸಿದ ಗಮನ ಸೆಳೆಯುವ ಸೂಚನೆಯ ಮೇಲೆ ಚರ್ಚೆಗೆ ಅವಕಾಶ ಪಡೆದ ಜೆಡಿಎಸ್‌ ಸದಸ್ಯರು, ಸದನ ಸಮಿತಿ ರಚನೆಗೆ ಆಗ್ರಹಿಸಿ ಸಭಾಪತಿ ಪೀಠದ ಎದುರು ಗುರುವಾರ ಮತ್ತು ಶುಕ್ರವಾರ ಧರಣಿ ನಡೆಸಿದ್ದರು. ಸೋಮವಾರ ಕೂಡಾ ಕಲಾಪ ಆರಂಭವಾಗುತ್ತಿದ್ದಂತೆ ಧರಣಿ ಮುಂದುವರಿಸಿದರು.

ಸದನದಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ಈ ವಿಚಾರವನ್ನು ಹೈಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆ ನಡೆಸಲಾಗುವುದು’ ಎಂದು ಮನವಿ ಮಾಡಿದರು.

ADVERTISEMENT

ಅದಕ್ಕೂ ಜೆಡಿಎಸ್ ಸದಸ್ಯರು ಒಪ್ಪಲಿಲ್ಲ. ಹೀಗಾಗಿ, ಕಲಾಪವನ್ನು 10 ನಿಮಿಷ ಮುಂದೂಡಿದ ಸಭಾಪತಿ, ತಮ್ಮ ಕಚೇರಿಯಲ್ಲಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಮತ್ತು ಜೆಡಿಎಸ್‌ ಸದಸ್ಯರ ಜೊತೆ ಚರ್ಚಿಸಿದರು.

ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ, ಜಂಟಿ ಸದನ ಸಮಿತಿ ರಚಿಸುವ ಸರ್ಕಾರದ ತೀರ್ಮಾನವನ್ನು ಮುಖ್ಯಮಂತ್ರಿ ಪ್ರಕಟಿಸಿದರು. ಬಳಿಕ ಜೆಡಿಎಸ್‌ ಸದಸ್ಯರು ಧರಣಿ ವಾಪಸ್‌ ಪಡೆದರು. ಕಾಂಗ್ರೆಸ್ಸಿನ ಸಿ.ಎಂ ಇಬ್ರಾಹಿಂ ಮತ್ತು ವಿರೋಧ ಪಕ್ಷದ ನಾಯಕ ಎಸ್‌. ಆರ್‌. ಪಾಟೀಲ, ‘ಪರಿಷತ್‌ನ ಸದಸ್ಯರನ್ನೇ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಬೇಕು’ ಎಂದು ಸಲಹೆ ನೀಡಿದರು. ಈ ವಿಚಾರದಲ್ಲಿ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳುತ್ತೇನೆ’ ಎಂದು ಸಭಾಪತಿ ಹೇಳಿದರು.

ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಿದ ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ, ‘ಕೆಲವು ನರ್ಸಿಂಗ್‌ ಮತ್ತು ಸರೆ ವೈದ್ಯಕೀಯ ಮೆಡಿಕಲ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತರಗತಿಗೇ ಹಾಜರಾಗುತ್ತಿಲ್ಲ. ನೇರವಾಗಿ ಪರೀಕ್ಷೆಗೆ ಬಂದು ಪ್ರಮಾಣಪತ್ರ ತೆಗೆದುಕೊಂಡು ಹೋಗುತ್ತಿದ್ದಾರೆ. ಈಗಾಗಲೇ ಗಂಗಾ ಕಲ್ಯಾಣ ಹಾಗೂ ಶುದ್ಧ ಕುಡಿಯುವ ನೀರಿನ ಯೋಜನೆ ಸಂಬಂಧ ತನಿಖೆಗೆ ಸದನ ಸಮಿತಿ ರಚಿಸಲಾಗಿದೆ. ಈ ವಿಷಯದಲ್ಲಿ ಪ್ರತಿಷ್ಠೆ ಯಾಕೆ? ಸದನ ಸಮಿತಿ ಮಾಡಿ, ಆಡಳಿತ ಪಕ್ಷದ ಸದಸ್ಯರೇ ಸದಸ್ಯರಾಗಲಿ’ ಎಂದು ಒತ್ತಾಯಿಸಿದರು.

ಎಸ್.ಆರ್.ಪಾಟೀಲ, ‘ಮೂರು ದಿನಗಳಿಂದ ಕಲಾಪ ವ್ಯರ್ಥವಾಗುತ್ತಿದೆ. ಜೆಡಿಎಸ್‍ನವರು ಪಟ್ಟು ಸಡಿಲಿಸುತ್ತಿಲ್ಲ. ಸದನ ಸಮಿತಿ ಮಾಡಿ ಸಮಸ್ಯೆ ಬಗೆಹರಿಸಿ’ ಎಂದರು.

ಆಗ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ‘ರಾಜ್ಯದಲ್ಲಿರುವ ಎಲ್ಲ 600 ನರ್ಸಿಂಗ್ ಸಂಸ್ಥೆಗಳ ಮೂಲಸೌಲಭ್ಯಗಳ ಕುರಿತು ತಜ್ಞರ ಸಮಿತಿಯಿಂದ ತನಿಖೆ ಮಾಡುತ್ತೇವೆ. ಲೋಪದೋಷಗಳಿದ್ದರೆ ಸರಿಪಡಿಸುತ್ತೇವೆ’ ಎಂದರು.

ಅದಕ್ಕೆ ಜೆಡಿಎಸ್‌ ಸದಸ್ಯರು ಒಪ್ಪಲಿಲ್ಲ. ಅಷ್ಟೇ ಅಲ್ಲ, ‘ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ಸಮಿತಿ ಮಾಡುತ್ತೇವೆ. ನ್ಯಾಯಮೂರ್ತಿ ಹೆಸರು ನೀವೇ ಶಿಫಾರಸು ಮಾಡಿ’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರೂ ಪಟ್ಟು ಸಡಿಲಿಸಲಿಲ್ಲ.

ಜೆಡಿಎಸ್‍ನ ಮರಿತಿಬ್ಬೇಗೌಡ, ‘ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ಹಿಂದೆ ರಚಿಸಿದ್ದ ಸಮಿತಿಗಳ ವರದಿ ಏನಾಗಿವೆ ಎಂದು ನಮಗೆ ಗೊತ್ತಿದೆ. ನ್ಯಾಯಮೂರ್ತಿಗಳಿಂದ ತನಿಖೆ ನಡೆಸಿದರೆ ಸಚಿವರು ಅವರನ್ನೇ ಬುಕ್ ಮಾಡುತ್ತಾರೆ’ ಎಂದು ಆರೋಪಿಸಿದರು. ಆಗ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತು. ವೈಯಕ್ತಿಕ ವಿಚಾರ ಪ್ರಸ್ತಾಪಿಸದಂತೆ ಸಭಾಪತಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.