ADVERTISEMENT

ಒಬಿಸಿ ಅಧಿಕಾರ ರಾಜ್ಯಗಳಿಗೆ ನ್ಯಾಯೋಚಿತ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 19:55 IST
Last Updated 11 ಆಗಸ್ಟ್ 2021, 19:55 IST
ಡಾ.ಎಚ್‌.ಸಿ.ಮಹದೇವಪ್ಪ
ಡಾ.ಎಚ್‌.ಸಿ.ಮಹದೇವಪ್ಪ   

ಬೆಂಗಳೂರು: ಇತರೆ ಹಿಂದುಳಿದ ವರ್ಗಗಳನ್ನು(ಒಬಿಸಿ) ಗುರುತಿಸುವ ಅಧಿಕಾರ ವನ್ನು ಆಯಾ ರಾಜ್ಯಗಳಿಗೆ ದೊರಕಿಸಿ ಕೊಡುವ ಸಂವಿಧಾನದ 127ನೇ ತಿದ್ದುಪಡಿ ತಾಂತ್ರಿಕವಾಗಿ ನ್ಯಾಯಬದ್ಧ ವಿಚಾರ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದ್ದಾರೆ.

ತಿದ್ದುಪಡಿ ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿದ್ದು, ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಬಳಿಕ ರಾಷ್ಟ್ರಪತಿ ಯವರ ಅಂಕಿತ ಸಿಕ್ಕಿದರೆ, 3 ವರ್ಷಗಳ ಹಿಂದೆ ರಾಜ್ಯ ಸರ್ಕಾರಗಳಿಂದ ಕಸಿದುಕೊಂಡಿದ್ದ ಸಾಂವಿಧಾನಿಕ ಹಕ್ಕೊಂದನ್ನು ಕೇಂದ್ರವು ರಾಜ್ಯಗಳಿಗೆ ಮರಳಿಸಿದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಒಂದು ಪ್ರಾದೇಶಿಕ ಗಡಿಯೊಳಗೆ ವಾಸಿಸುವ ನಿರ್ದಿಷ್ಟ ಭಾಷೆಯ ಜನ ಸಮುದಾಯಗಳ ಬದುಕಿನ ವಿನ್ಯಾಸಗಳು ಮತ್ತು ಒಂದು ರಾಜ್ಯದ ಆರ್ಥಿಕತೆಯ ಪರಿಮಿತಿಯಲ್ಲಿ ಬದುಕುವ ಮತ್ತು ಹಾಗೆ ಬದುಕುವಾಗ ಅವರ ಬದುಕಿನಲ್ಲಿ ಉಂಟಾಗುವ ಬದಲಾವಣೆ ಗಳನ್ನು ಆಯಾ ರಾಜ್ಯದೊಳಗಿನ ತಜ್ಞರು ಅರ್ಥ ಮಾಡಿಕೊಳ್ಳುವಷ್ಟು ಸುಲಭವಾಗಿ ಹೊರಗಿನ ಮಂದಿ ಅರ್ಥ ಮಾಡಿಕೊಳ್ಳುವುದು ಕಷ್ಟ ಎಂದು ಮಹದೇವಪ್ಪ ಹೇಳಿದ್ದಾರೆ.

ADVERTISEMENT

ಈಗಾಗಲೇ ತಜ್ಞರ ಆಯೋಗದ ಶಿಫಾರಸ್ಸಿನ ಮೇರೆಗೆ ಕೆಲ ನಿರ್ದಿಷ್ಟ ಜನ ಸಮುದಾಯಗಳಿಗೆ ನೀಡಲಾದ ಹಿಂದುಳಿದ ವರ್ಗ ಸ್ಥಾನಮಾನ ಪ್ರಕ್ರಿಯೆಯನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಹಾವನೂರು, ಚಿನ್ನಪ್ಪರೆಡ್ಡಿ ಹಾಗೂ ಇನ್ನೂ ಕೆಲ ಆಯೋಗದ ವರದಿಗಳನ್ನು ಪರಾಮರ್ಶೆ ಮಾಡುವ ಅಗತ್ಯವಿದೆ. ಈಗಾಗಲೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿದ್ದು, ಅದರ ಆಧಾರದಲ್ಲಿ ಈಗಿನ ಜನಸಂಖ್ಯೆಯ ಸಾಮಾಜಿಕ ಸ್ಥಿತಿಗತಿ ಆಧರಿಸಿ, ಮೀಸ ಲಾತಿ ಇನ್ನಿತರ ಸಂವಿಧಾನಾತ್ಮಕ ಅನುಕೂಲಗಳನ್ನು ನೀಡುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಹೆಚ್ಚು ಅರ್ಥ ಪೂರ್ಣ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.