ADVERTISEMENT

ಪಂಚಾಯತ್‌ರಾಜ್‌ ಕಾಯ್ದೆ ತಿದ್ದುಪಡಿಗೆ ಪರಿಷತ್‌ ಸದಸ್ಯರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 21:34 IST
Last Updated 25 ಆಗಸ್ಟ್ 2022, 21:34 IST
ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಆಯ್ಕೆಯಾದ ದಿನೇಶ್‌ಗೂಳಿಗೌಡ, ಮಧು ಜಿ. ಮಾದೇಗೌಡ, ಎಸ್. ರವಿ, ಮಂಜುನಾಥ ಭಂಡಾರಿ, ಅನಿಲ್ ಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು
ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಆಯ್ಕೆಯಾದ ದಿನೇಶ್‌ಗೂಳಿಗೌಡ, ಮಧು ಜಿ. ಮಾದೇಗೌಡ, ಎಸ್. ರವಿ, ಮಂಜುನಾಥ ಭಂಡಾರಿ, ಅನಿಲ್ ಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು   

ಬೆಂಗಳೂರು: ‘ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರನ್ನು ತೆಗೆದುಹಾಕುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿಯ ಕರಡಿನಲ್ಲಿರುವ ಅಂಶಗಳಿಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಆಯ್ಕೆಯಾದ ಸದಸ್ಯರುಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೂಲ ಕಾಯ್ದೆಯಲ್ಲಿರುವ ಈ ಅಂಶಗಳನ್ನೇ ಉಳಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿದ್ದಾರೆ.

‘ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯ ತನ್ನ ಕರ್ತವ್ಯಗಳನ್ನು ನಿರ್ವಹಿಸುವಾಗ ದುರ್ನಡತೆ ಅಥವಾ ತಲೆತಗ್ಗಿಸುವಂಥ ನಡತೆಯ ತಪ್ಪಿತಸ್ಥನೆಂದು ಸಾಬೀತಾದರೆ ಕ್ರಮ ತೆಗೆದುಕೊಳ್ಳಲು ಕರಡಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ, ದುರ್ನಡತೆ ಅಥವಾ ತಲೆತಗ್ಗಿಸುವಂಥ ನಡತೆಗಳು ಯಾವುವು ಎಂಬುದನ್ನು ಸ್ಪಷ್ಟಪಡಿಸದಿರುವುದರಿಂದ ದೂರುದಾರರು, ತನಿಖಾಧಿಕಾರಿಗಳು, ವಿಚಾರಣಾಧಿಕಾರಿಗಳು ತಮಗೆ ತೋಚಿದಂತೆ ಈ ಅಂಶಗಳನ್ನು ವ್ಯಾಖ್ಯಾನಿಸುವ ಸಾಧ್ಯತೆಯಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ತೊಂದರೆ ಕೊಡಲು ಈ ನಿಯಮವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ’ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

‘ಕರಡಿನಲ್ಲಿ ವಿಚಾರಣಾಧಿಕಾರಿ ಎಂದರೆ ಸರ್ಕಾರ ನಿರ್ದಿಷ್ಟಪಡಿಸಿದ ಅಧಿಕಾರಿ ಎಂದು ಹೇಳಲಾಗಿದೆ. ಆದರೆ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವ ಅಧಿಕಾರ ರಾಜ್ಯ ಚುನಾವಣಾ ಆಯೋಗದ್ದೇ ಹೊರತು ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಈಗಾಗಲೇ ರಾಜ್ಯ ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಅಲ್ಲದೆ, ದೂರು ಸ್ವೀಕರಿಸುವ ಅಧಿಕಾರ ಕಾಯ್ದೆಯಲ್ಲಿರುವಂತೆ ರಾಜ್ಯ ಸರ್ಕಾರಕ್ಕೆ ಮಾತ್ರ ಇರಬೇಕು’ ಎಂದೂ
ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.