ADVERTISEMENT

ಸಂಸ್ಕೃತಿ ಇಲಾಖೆ ನಡೆಗೆ ಆಕ್ಷೇಪ: ಧನಸಹಾಯಕ್ಕೆ ಕಾರ್ಯಕ್ರಮದ ನಿರ್ಬಂಧ

ಕಲಾ ಸಂಘಟಕರಿಗೆ ಕನಿಷ್ಠ ಆರ್ಥಿಕ ನೆರವು ಕೈ ತಪ್ಪುವ ಆತಂಕ l

ವರುಣ ಹೆಗಡೆ
Published 26 ನವೆಂಬರ್ 2022, 19:31 IST
Last Updated 26 ನವೆಂಬರ್ 2022, 19:31 IST
ಕನ್ನಡ ಭವನ
ಕನ್ನಡ ಭವನ   

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಧನಸಹಾಯವನ್ನೇ ನೆಚ್ಚಿಕೊಂಡಿದ್ದ ನಾಡಿನ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ಈ ಬಾರಿ ಕನಿಷ್ಠ ಆರ್ಥಿಕ ನೆರವು ಸಹ ಕೈ ತಪ್ಪುವ ಆತಂಕ ಎದುರಾಗಿದೆ.

ಡಿಸೆಂಬರ್ ಅಂತ್ಯದೊಳಗೆ ಕನಿಷ್ಠ 3 ಕಾರ್ಯಕ್ರಮಗಳನ್ನು ನಡೆಸಿ, ದಾಖಲೆ ಗಳನ್ನು ಸೇವಾಸಿಂಧು ಪೋರ್ಟಲ್‌ನಲ್ಲಿ ಸಲ್ಲಿಸಬೇಕೆಂಬ ಇಲಾಖೆಯ ಸೂಚನೆಗೆ ಆಕ್ಷೇಪ ವ್ಯಕ್ತವಾಗಿದೆ.

ಧನಸಹಾಯಕ್ಕೆ ಸಂಬಂಧಿಸಿ ಪಾರದರ್ಶಕತೆಯ ಹೆಸರಿನಲ್ಲಿಇಲಾಖೆ ಹೊರಡಿಸಿದ್ದ ಮಾರ್ಗಸೂಚಿ ಸಂಘ–ಸಂಸ್ಥೆಗಳಿಗೆ ತಲೆನೋವಾಗಿದೆ. ಪ್ರತಿ ವರ್ಷ ಧನಸಹಾಯದ ಪಟ್ಟಿ ಬಿಡುಗಡೆಯಾದ ಬಳಿಕ ಆರ್ಥಿಕ ನೆರವಿನ ಅಸಮಾನತೆ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುತ್ತಿದ್ದವು. ಈ ಬಾರಿ ಧನಸಹಾಯಕ್ಕೆ ವಿಧಿಸಿರುವ ನಿರ್ಬಂಧಗಳೇ ಸಾಂಸ್ಕೃತಿಕ ವಲಯದ ಅಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

ಧನಸಹಾಯಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ ಸಂಘ–ಸಂಸ್ಥೆಗಳಿಗೆ ಡಿಸೆಂಬರ್ ಅಂತ್ಯದ ಒಳಗೆ ಮೂರು ಕಾರ್ಯಕ್ರಮಗಳನ್ನು ಆಯೋಜಿಸಿ, ದಾಖಲೆಗಳನ್ನು ಸೇವಾಸಿಂಧು ಪೋರ್ಟಲ್‌ನಲ್ಲಿ ನಮೂದಿಸಬೇಕು ಎಂದು ಸೂಚಿಸಲಾಗುತ್ತಿದೆ. ಇದನ್ನು ಜಂಟಿ ನಿರ್ದೇಶಕರ ಅಧ್ಯಕ್ಷತೆಯ ಧನಸಹಾಯ ಶಿಫಾರಸು ಸಮಿತಿ ಪರಿಶೀಲಿಸಿ, ಶಿಫಾರಸು ಮಾಡಬೇಕಾಗುತ್ತದೆ. ಸ್ವಂತ ಹಣದಲ್ಲಿ ಕಾರ್ಯಕ್ರಮ ನಡೆಸಿ, ದಾಖಲೆ ಸಲ್ಲಿಸಿದವರಿಗೂ ಧನಸಹಾಯ ಸಿಗುವ ಖಾತ್ರಿ ಇಲ್ಲವಾಗಿದೆ.

ಧನಸಹಾಯಕ್ಕಾಗಿ ಸರ್ಕಾರವು ಪ್ರತಿವರ್ಷ ₹ 15 ಕೋಟಿಯಿಂದ ₹ 20 ಕೋಟಿ ಖರ್ಚು ಮಾಡುತ್ತಿದೆ. ರಾಜ್ಯದಲ್ಲಿ 7 ಸಾವಿರಕ್ಕೂ ಅಧಿಕ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿದ್ದರೂ, ಅರ್ಜಿ ಅಲ್ಲಿಸುವ 4 ಸಾವಿರಕ್ಕೂ ಅಧಿಕ ಸಂಘ–ಸಂಸ್ಥೆಗಳಲ್ಲಿ 900ರಿಂದ 1,000 ಸಂಘ–ಸಂಸ್ಥೆಗಳಿಗೆ ಧನಸಹಾಯ ಒದಗಿಸಲಾಗುತ್ತಿದೆ.

ಹತ್ತಾರು ನಿರ್ಬಂಧ:ಈ ಹಿಂದೆ ಸಂಘ–ಸಂಸ್ಥೆಗಳ ಹಿಂದಿನ ಕಾರ್ಯಚಟುವಟಿಕೆಗಳನ್ನು ಪರಿ ಶೀಲಿಸಿ, ಧನಸಹಾಯಕ್ಕೆ ಆಯ್ಕೆ ಮಾಡಲಾಗುತ್ತಿತ್ತು.ಉತ್ತಮವಾಗಿ ಕಾರ್ಯಕ್ರಮ ಮಾಡಿದ ಕೆಲವರಿಗೆ ₹ 10 ಲಕ್ಷದವರೆಗೂ ಅನುದಾನ ಬರುತ್ತಿತ್ತು. ಈಗ ಆಯ್ಕೆಯಾದ ಸಂಘ–ಸಂಸ್ಥೆಯೊಂದಕ್ಕೆ ಅನುದಾನದ ಗರಿಷ್ಠ ಮಿತಿಯನ್ನೂ ₹ 2 ಲಕ್ಷಕ್ಕೆ ಸೀಮಿತಗೊಳಿಸಲಾಗಿದೆ. ಇಷ್ಟು ಹಣ ಪಡೆಯಲು ಹತ್ತಾರು ನಿರ್ಬಂಧಗಳನ್ನು ವಿಧಿಸಲಾಗಿದೆ.

‘ನಮ್ಮ ಬಳಿ ಕಾರ್ಯಕ್ರಮ ನಡೆಸಲು ಹಣವಿದ್ದಲ್ಲಿ ಧನಸಹಾಯಕ್ಕೆ ಅರ್ಜಿ ಸಲ್ಲಿಸುತ್ತಿರಲಿಲ್ಲ. ಪಾರದರ್ಶಕತೆ ಹೆಸರಿನ ನಿರ್ಬಂಧಗಳಿಂದ ಜಾನಪದ ಸೇರಿ ವಿವಿಧ ಕಲಾವಿದರು ನೆರವು ಕೈತಪ್ಪುವ ಆತಂಕ ಎದುರಾಗಿದೆ.
ಅಲ್ಪಾವಧಿಯಲ್ಲಿ ಮೂರು ಕಾರ್ಯಕ್ರಮಗಳನ್ನು ನಡೆಸಿ, ದಾಖಲಾತಿ ಸಲ್ಲಿಸುವ ವೇಳೆಗೆ ಅವಧಿಯೇ ಮುಗಿದಿರುತ್ತದೆ. ಹೀಗಾಗಿ, ಈ ಮೊದಲಿದ್ದ ವ್ಯವಸ್ಥೆಯನ್ನೇ ಜಾರಿ ಮಾಡಬೇಕು’ ಎಂದು ಕಲಾವಿದ
ಡಾ. ಜಯಸಿಂಹ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಪ್ರಕಾಶ್ ನಿಟ್ಟಾಲಿ ದೂರವಾಣಿ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ಎರಡು ಬಾರಿ ಅರ್ಜಿ ಸಲ್ಲಿಕೆ

ಧನಸಹಾಯ ಬಯಸುವ ಸಂಘ–ಸಂಸ್ಥೆಗಳು ಕ್ರಿಯಾಯೋಜನೆ ಹಾಗೂ ಸಂಬಂಧಿಸಿದ ದಾಖಲಾತಿ ಸಹಿತ ಸೇವಾಸಿಂಧು ಪೋರ್ಟಲ್‌ನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿವೆ.

ಮತ್ತೆ ಮೂರು ಕಾರ್ಯಕ್ರಮಗಳನ್ನು ನಡೆಸಿ, ಅದರ ದಾಖಲೆಗಳನ್ನು ಪೋರ್ಟಲ್‌ ಮೂಲಕ ಸಲ್ಲಿಸಬೇಕಿದೆ. ಇದೇ ಮೊದಲ ಬಾರಿಗೆ ಎರಡು ಬಾರಿ ಅರ್ಜಿಸಲ್ಲಿಸಲು ಸೂಚಿಸಲಾಗಿದೆ. ಇದರಿಂದ ಗ್ರಾಮೀಣ ಕಲಾವಿದರು ಗೊಂದಲಕ್ಕೆ ಒಳಗಾಗಿದ್ದು, ಕನ್ನಡ ಭವನಕ್ಕೆ ಅಲೆದಾಟ ನಡೆಸಲಾರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.