ಪ್ರಿಯಾಂಕ್ ಖರ್ಗೆ
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಅ. 29ರಂದು ಬೆಂಗಳೂರಿನಲ್ಲಿ ‘ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸುಸ್ಥಿರತೆಯ ಶೃಂಗಸಭೆ ಆಯೋಜಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕರ್ನಾಟಕದ ಗ್ರಾಮೀಣ ಭಾಗ ಎದುರಿಸುತ್ತಿರುವ ಕುಡಿಯವ ನೀರು ಹಾಗೂ ನೈರ್ಮಲ್ಯದ ಸಮಸ್ಯೆಗೆ ಪರಿಹಾರ ಒದಗಿಸುವ ವಿನೂತನ ಆಲೋಚನೆಗಳಿಗೆ ಈ ಶೃಂಗಸಭೆ ವೇದಿಕೆಯಾಗಲಿದೆ. ಹೊಸ ತಂತ್ರಜ್ಞಾನ ಬಳಸಿಕೊಂಡು ತ್ಯಾಜ್ಯ ನಿರ್ವಹಣೆ, ನೀರಿನ ಮಾಲಿನ್ಯವನ್ನು ಪತ್ತೆಹಚ್ಚುವುದು, ಕೈಗಾರಿಕಾ ಅಭಿವೃದ್ಧಿಗೆ ಉದಯೋನ್ಮುಖ ತಂತ್ರಜ್ಞಾನಗಳ ಮೌಲ್ಯಮಾಪನ ಮಾಡುವುದು ಸಭೆಯ ಮುಖ್ಯ ಕಾರ್ಯಸೂಚಿ ಎಂದು ಮಾಹಿತಿ ನೀಡಿದ್ದಾರೆ.
ಪ್ರತಿಷ್ಠಿತ ಉದ್ಯಮದ ಮುಖಂಡರು, ಉದ್ಯಮಿಗಳು ಮತ್ತು ಸಂಶೋಧಕರನ್ನು ಒಗ್ಗೂಡಿಸಿ, ಅವರ ಆಲೋಚನೆ ಹಾಗೂ ಅಭಿಪ್ರಾಯಗಳ ವಿನಿಮಯವನ್ನು ಉತ್ತೇಜಿಸುವುದು. ಗ್ರಾಮೀಣ ಸಮುದಾಯಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ ಪ್ರಮುಖ ಆದ್ಯತೆ ನೀಡಲಾಗುತ್ತಿದೆ ಎಂದಿದ್ದಾರೆ.
ಗ್ರಾಮೀಣ ಭಾಗದ ನೀರು ಮತ್ತು ನೈರ್ಮಲ್ಯದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ವಿನೂತನ ಆಲೋಚನೆಗಳನ್ನು ಪ್ರಸ್ತುತಪಡಿಸಲು ಅರ್ಜಿ ಆಹ್ವಾನಿಸಲಾಗಿದೆ.
ನವೋದ್ಯಮಗಳು ಅರ್ಜಿ ಸಲ್ಲಿಸಬಹುದು. ಶೃಂಗಸಭೆಯಲ್ಲಿ ತಮ್ಮ ಆಲೋಚನೆಗಳನ್ನು ಪ್ರಸ್ತುತ ಪಡಿಸುವರಿಗೆ ವಿಶೇಷ ಅಧಿವೇಶನ ನಡೆಸಲಾಗುವುದು, ಅಲ್ಲಿ ಆಯ್ದ ನವೋದ್ಯಮ ವಿಜೇತರಿಗೆ ₹25 ಲಕ್ಷ ಬಹುಮಾನ ನೀಡಲಾಗುವುದು. ಆಸಕ್ತರು ತಮ್ಮ ಪ್ರಸ್ತಾವನೆಗಳ ಪಿಚ್‌ಡೆಕ್ ಪ್ರಸ್ತಾವನೆಯೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಸಚಿವ ಪ್ರಿಯಾಂಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.