ADVERTISEMENT

ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ– ಸಿ.ಎಂಗೆ ಶಾಸಕರ ದೂರು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 0:53 IST
Last Updated 10 ಡಿಸೆಂಬರ್ 2025, 0:53 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಳಗಾವಿ: ಗ್ಯಾರಂಟಿ ಯೋಜನೆಗಳಿಂದಾಗಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಕೊರತೆಯಾಗುತ್ತಿದೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಅಳಲು ತೋಡಿಕೊಂಡಿದ್ದಾರೆ.

ಇಲ್ಲಿನ ಫೇರ್‌ ಫೀಲ್ಡ್‌ ಮ್ಯಾರಿಯೆಟ್‌ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಿತು. ಈ ವೇಳೆ ಸರ್ಕಾರದ ಆಡಳಿತ ಮತ್ತು ಅನುದಾನದ ವಿಚಾರದಲ್ಲಿ ಶಾಸಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

ADVERTISEMENT

ಆರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಉತ್ತರ ಕರ್ನಾಟಕದ ಸಮಸ್ಯೆ, ಕಬ್ಬು ದರ, ಮೆಕ್ಕೆಜೋಳ ಖರೀದಿ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹೊಣೆಗಾರಿಕೆಗೆ ಸಂಬಂಧಿಸಿದ ಅಂಕಿ–ಅಂಶಗಳ ಸಂಪೂರ್ಣ ಮಾಹಿತಿಯನ್ನು ಶಾಸಕರಿಗೆ ಲಿಖಿತವಾಗಿ ನೀಡಿದ ಮುಖ್ಯಮಂತ್ರಿ, ‘ಸದನದಲ್ಲಿ ವಿರೋಧ ಪಕ್ಷದವರಿಗೆ ಉತ್ತರ ಕೊಡದಿದ್ದರೆ ಜನರಿಗೆ ಸರ್ಕಾರದ ವಿರುದ್ದ ತಪ್ಪು ಸಂದೇಶ ಹೋಗಲಿದೆ. ಕೇಂದ್ರ ಸರ್ಕಾರ ಮತ್ತು ಬಿಜೆಪಿ ಸರ್ಕಾರ ಇದ್ದಾಗ ಆಗಿರುವ ಲೋಪದೋಷಗಳನ್ನು ಎತ್ತಿತೋರಿಸಿ ಉತ್ತರ ನೀಡಬೇಕು’ ಎಂದು ಸಲಹೆ ನೀಡಿದರು ಎಂದೂ ಗೊತ್ತಾಗಿದೆ.

ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದಾರೆ.  ಸ್ವೇಚ್ಛಾಚಾರದಿಂದ ಆಧಿಕಾರಿವರ್ಗ ವರ್ತಿಸುತ್ತಿದೆ. ಅಧಿಕಾರ ದುರುಪಯೋಗದ ಬಗ್ಗೆ ದೂರುಗಳು ಬಂದರೂ ಯಾವುದೇ ಕ್ರಮ ಆಗುತ್ತಿಲ್ಲ. ಯಾರೊಬ್ಬರಿಗೂ ನೋಟಿಸ್‌ ನೀಡುವ ಕೆಲಸ ಆಗುತ್ತಿಲ್ಲ. ಆರೋಪಗಳು ತನಿಖೆಯಲ್ಲಿ ಸಾಬೀತಾದರೂ ಕ್ರಮ ಆಗದೇ ಇರುವುದರಿಂದ ಅಧಿಕಾರಿಗಳಲ್ಲಿ ಯಾವುದೇ ಭಯ ಇಲ್ಲದಂತಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಇಲ್ಲವಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸುಧಾಮ್‌ ದಾಸ್ ಅವರು ನೇರವಾಗಿ ಹೇಳಿದರು ಎಂದು ಗೊತ್ತಾಗಿದೆ.

ಅಲ್ಲದೆ, ಗ್ಯಾರಂಟಿ ಯೋಜನೆಗಳ ಬಗ್ಗೆ ಶಾಸಕರಲ್ಲಿ ಅಸಮಾಧಾನವಿದೆ. ಆದರೆ, ಧೈರ್ಯವಾಗಿ ತಮ್ಮ ಅಭಿಪ್ರಾಯ ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಮುಂದಿನ ಸಭೆಯಲ್ಲಿಯಾದರೂ ಮುಕ್ತವಾಗಿ ಮಾತನಾಡಲು ಅವಕಾಶ ಸಿಗಬೇಕು ಎಂದೂ ಸುಧಾಮ್‌ ದಾಸ್‌ ಹೇಳಿದರು ಎಂದು ತಿಳಿದುಬಂದಿದೆ.

ಶಾಸಕರ ಅಳಲು ಆಲಿಸಿದ ಮುಖ್ಯಮಂತ್ರಿ, ಬಾಕಿ ಇರುವ ಅನುದಾನ ಬಿಡುಗಡೆ ಮಾಡಲಾಗುವುದು. ಅಧಿಕಾರಿ ವರ್ಗಕ್ಕೂ ಎಚ್ಚರಿಕೆ ನೀಡುವುದಾಗಿ ಸಮಾಧಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿಯ ಉಚ್ಚಾಟಿತ ಶಾಸಕರು ಭಾಗಿ: ಕಾಂಗ್ರೆಸ್‌ನ 138 ಶಾಸಕರ ಪೈಕಿ 115 ಮಂದಿ, 37 ವಿಧಾನ ಪರಿಷತ್‌ ಸದಸ್ಯರ ಪೈಕಿ 33 ಮಂದಿ ಸಭೆಗೆ ಹಾಜರಾಗಿದ್ದರು. ಬಿಜೆಪಿಯ ಉಚ್ಚಾಟಿತ ಶಾಸಕರಾದ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.