ADVERTISEMENT

ಒಳ ಮೀಸಲಾತಿ ಗೊಂದಲ: ತಿದ್ದುಪಡಿ ಪ್ರಸ್ತಾವನೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 6:33 IST
Last Updated 2 ಏಪ್ರಿಲ್ 2023, 6:33 IST

ಬೆಂಗಳೂರು: ಒಳಮೀಸಲಾತಿ ಜಾರಿ ಕುರಿತು ಕೇಂದ್ರಕ್ಕೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪಟ್ಟಿಯಲ್ಲಿ ಹಲವು ಗೊಂದಲಗಳಿದ್ದು, ತಿದ್ದುಪಡಿ ಶಿಫಾರಸನ್ನು ಮತ್ತೊಮ್ಮೆ ರಾಜ್ಯ ಸರ್ಕಾರ ಕಳುಹಿಸಿದೆ.

ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳನ್ನು ನಾಲ್ಕು ವಿಭಾಗ ಮಾಡಲು ಸಚಿವ ಸಂಪುಟ ನಿರ್ಧರಿಸಿತ್ತು. ಅದನ್ನು ಕೇಂದ್ರಕ್ಕೆ ಶಿಫಾರಸು ಮಾಡುವಾಗ ಬಲಗೈ ಸಮುದಾಯದಲ್ಲಿನ(ಅಸ್ಪೃಶ್ಯ) ‘ಹೊಲೆಯ, ಹೊಲಯ, ಹೊಲೇರ್‌’ ಉಪ ಜಾತಿಗಳನ್ನು ಎರಡನೇ ಗುಂಪಿಗೆ(ಶೇ5.5 ಮೀಸಲಾತಿ) ಸೇರಿಸುವ ಬದಲು ನಾಲ್ಕನೇ ಗುಂಪಿಗೆ(ಶೇ 1ರಷ್ಟು ಮೀಸಲಾತಿ) ಸೇರಿಸಲಾಗಿತ್ತು.

‘ಇದು ಅವೈಜ್ಞಾನಿಕವಾಗಿದ್ದು, ಕೂಡಲೇ ಶಿಫಾರಸು ಹಿಂಪಡೆಯಬೇಕು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‌ ಅವರು ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದರು. ‘ಯಾವುದೇ ಅಧ್ಯಯನ ಇಲ್ಲದೆ ಅವೈಜ್ಞಾನಿಕವಾಗಿ ಒಳ ಮೀಸಲಾತಿ ವರ್ಗೀಕರಿಸಲಾಗಿದೆ. ಇದು ಚುನಾವಣಾ ಕೇಂದ್ರಿತ ನಿರ್ಧಾರ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಮೀಸಲಾತಿ ವರ್ಗೀಕರಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಒಳಮೀಸಲಾತಿ ಹೋರಾಟಗಾರ ಎಸ್.ಮಾರಪ್ಪ ಅವರು, ‘ಆದಿ ಕರ್ನಾಟಕ ಮತ್ತು ಆದಿ ‌ದ್ರಾವಿಡ ಎಂಬ ವಿಂಗಡಣೆಯೂ ಅವೈಜ್ಞಾನಿಕವಾಗಿದೆ’ ಎಂದು ‘‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಹಳೇ ‌ಮೈಸೂರು ಭಾಗದಲ್ಲಿ ಬಲಗೈಗೆ (ಹೊಲೆಯ) ಸಂಬಂಧಿಸಿದ ಉಪಜಾತಿಯವರು ಜಾತಿ ಪ್ರಮಾಣಪತ್ರದಲ್ಲಿ ‘ಆದಿ ಕರ್ನಾಟಕ’ ಎಂದು ಬರೆಸುತ್ತಿದ್ದರೆ, ಮಧ್ಯ ಕರ್ನಾಟಕದಲ್ಲಿ ಮಾದಿಗ(ಎಡಗೈ) ಸಂಬಂಧಿತ ಉಪಜಾತಿಗಳು ‘ಆದಿ ಕರ್ನಾಟಕ’ ಎಂದು ಬರೆಸುತ್ತಿವೆ. ಮೀಸಲಾತಿ ವರ್ಗೀಕರಣ ಮಾಡುವಾಗ ಆದಿ ಕರ್ನಾಟಕ ಎಂದರೆ ಬಲಗೈ, ಆದಿ ದ್ರಾವಿಡ ಎಂದರೆ ಎಡಗೈ ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಇದು ಅತ್ಯಂತ ಅವೈಜ್ಞಾನಿಕ ಕ್ರಮ’ ಎಂದರು.

‘ಆಕ್ಷೇಪಗಳು ವ್ಯಕ್ತವಾದ ಬಳಿಕ ತಿದ್ದುಪಡಿಯನ್ನು ರಾಜ್ಯ ಸರ್ಕಾರವು ಕೇಂದ್ರಕ್ಕೆ ಕಳಹಿಸಿದೆ. ಅದರಲ್ಲಿ ಹೊಲೆಯ, ಹೊಲಯ ಮತ್ತು ಹೊಲೇರ್ ಉಪಜಾತಿಗಳನ್ನು ಎರಡನೇ ಗುಂಪಿಗೆ ಸೇರಿಸಿದೆ. ಮುದ್ರಣ ದೋಷದಿಂದ ಆಗಿದ್ದ ತಪ್ಪನ್ನು ಸರಿಪಡಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಎಂಬುದರ ಮುಂದೆ ಸ್ಪಷ್ಟವಾಗಿ ಜಾತಿಗಳನ್ನು ನಮೂದಿಸಬೇಕಿತ್ತು. ತಿದ್ದುಪಡಿ ಪ್ರಸ್ತಾವನೆಯಲ್ಲೂ ಅದನ್ನು ಮಾಡದೆ ಗೊಂದಲಗಳನ್ನು ಉಳಿಸಲಾಗಿದೆ. ನಾಲ್ಕನೇ ಗುಂಪಿನಲ್ಲಿ ಹಲವು ಅಸ್ಪೃಶ್ಯ ಜಾತಿಗಳನ್ನು ಉಳಿಸಲಾಗಿದೆ’ ಎಂದು ಎಸ್.ಮಾರಪ್ಪ ಹೇಳಿದರು.

ಮೋದಿ, ಅಮಿತ್ ಶಾ ಅಡ್ಡಗಟ್ಟುವ ಪ್ರತಿಭಟನೆ

ಗೊಂದಲಗಳನ್ನು ಸರಿಪಡಿಸಿ ಕೂಡಲೇ ಒಳ ಮೀಸಲಾತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು ಎಂದು ಎಸ್.ಮಾರಪ್ಪ ಒತ್ತಾಯಿಸಿದರು.

‘ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿದ್ದ ಪ್ರತಿಭಟನೆ ಕೈಬಿಡಲಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಚುನಾವಣಾ ಪ್ರಚಾರಕ್ಕೆ ಬರುವ ವೇಳೆ ಅವರನ್ನು ತಡೆದು ಪ್ರಶ್ನಿಸುವ ಹೋರಾಟ ನಡೆಯಲಿದೆ’ ಎಂದು ಹೇಳಿದರು.

‘ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಮುಂದುವರಿಸಿದರೆ ಕೇಂದ್ರ ಸರ್ಕಾರಕ್ಕೆ ಮುಟ್ಟುವುದಿಲ್ಲ. ಆದ್ದರಿಂದ ಪ್ರಧಾನಿ ಬರುವ ಕಾರ್ಯಕ್ರಮದಲ್ಲೇ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.