ADVERTISEMENT

ಹಳೆ ಮೈಸೂರು ಪ್ರಾಂತ್ಯದಲ್ಲಿ 40 ಕ್ಷೇತ್ರ ಗೆಲ್ಲುವ ಗುರಿ: ಬಿ.ವೈ.ವಿಜಯೇಂದ್ರ

ಮುಖ್ಯಮಂತ್ರಿ–ಪಕ್ಷದ ಕಾರ್ಯಕರ್ತರ ನಡುವಿನ ಸೇತುವೆಯಾಗಿ ಕೆಲಸ ಮಾಡುವೆ:

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 19:31 IST
Last Updated 17 ಆಗಸ್ಟ್ 2020, 19:31 IST
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸನ್ಮಾನಿಸಲಾಯಿತು
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸನ್ಮಾನಿಸಲಾಯಿತು   

ಮೈಸೂರು: ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ ಬಿ.ವೈ.ವಿಜಯೇಂದ್ರ, ಪಕ್ಷದ ಹಿರಿಯ ಮುಖಂಡರನ್ನು ಭೇಟಿಯಾಗಿ ಚರ್ಚಿಸಿದರು. ಆಶೀರ್ವಾದ ಪಡೆದರು. ಪಕ್ಷದ ಸಭೆಗಳಲ್ಲೂ ಪಾಲ್ಗೊಂಡು ಮುಂದಿನ ವಿಧಾನಸಭಾ ಚುನಾವಣೆ ಗೆಲುವಿನ ಮಂತ್ರವನ್ನು ಜಪಿಸಿದರು.

‘2008 ಹಾಗೂ 2018ರಲ್ಲಿ ಹಳೆ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿದ್ದರಿಂದಲೇ ಬಿಜೆಪಿ ಸರ್ಕಾರ ರಚನೆಗೆ ಕಸರತ್ತು ನಡೆಸಬೇಕಾಯಿತು. ಮುಂದಿನ ಬಾರಿ ಈ ರೀತಿ ಆಗದಂತೆ ಈಗಿನಿಂದಲೇ ಕೆಲಸ ಮಾಡಬೇಕಿದೆ. 150 ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವ ಗುರಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಂದಿದ್ದು, ಹಳೆ ಮೈಸೂರು ಪ್ರಾಂತ್ಯದಲ್ಲಿ ಕನಿಷ್ಠ 40 ಕ್ಷೇತ್ರಗಳನ್ನು ಗೆಲ್ಲಲು ಶ್ರಮಿಸಬೇಕು’ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

‘ಹಳೆ ಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಬಿಜೆಪಿಗೆ ಬೆಂಬಲವಿಲ್ಲ ಎಂದು ನಾವೇ ಅಂದುಕೊಂಡಿದ್ದೇವೆ. ಇದು ತಪ್ಪು. ಕೆ.ಆರ್.ಪೇಟೆ ಫಲಿತಾಂಶ ನಮಗೆ ಪಾಠವಾಗಬೇಕು. ನಾವು ಒಕ್ಕಲಿಗರ ಬಳಿಗೆ ತೆರಳಲೇಬೇಕು’ ಎಂಬ ಕಿವಿಮಾತನ್ನು ವಿಜಯೇಂದ್ರ ಹೇಳಿದರು.

ADVERTISEMENT

‘ನಾನು ಮುಖ್ಯಮಂತ್ರಿಯ ಮಗ. ಪಕ್ಷದ ಸಾಮಾನ್ಯ ಕಾರ್ಯಕರ್ತನೂ ಹೌದು. ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ನನ್ನ ತಂದೆ ಹೇಳಿರೋದು ಒಂದೇ ಮಾತು. ಅಧಿಕಾರ ಸಿಕ್ಕಾಗ ಜನರು, ಕಾರ್ಯಕರ್ತರ ಸೇವೆ ಮಾಡು ಎಂಬುದು. ಅದನ್ನು ಕೊನೆವರೆಗೂ ಪಾಲಿಸುವೆ’ ಎಂದು ನೆರೆದಿದ್ದ ಕಾರ್ಯಕರ್ತ ಸಮೂಹಕ್ಕೆ ತಿಳಿಸಿದರು.

ಹೈಕಮಾಂಡ್‌ ನಿರ್ಧಾರ: ‘ನಾನು ಎಲ್ಲಿಂದ ಸ್ಪರ್ಧಿಸಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ವರುಣಾ ಕ್ಷೇತ್ರದಿಂದ ನನ್ನ ಸ್ಪರ್ಧೆ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದು ಬಿ.ವೈ.ವಿಜಯೇಂದ್ರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

‘ನನ್ನನ್ನು ರಾಜ್ಯಕ್ಕೆ ಪರಿಚಯಿಸಿದ್ದು ವರುಣಾ ಕ್ಷೇತ್ರ. ಅಲ್ಲಿನ ಜನರ ಪ್ರೀತಿಗೆ ಋಣಿಯಾಗಿದ್ದೇನೆ’ ಎಂದು ಹೇಳಿದರು.

‘ಎಚ್‌.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವುದು, ನಿಗಮ–ಮಂಡಲಿಗೆ ನೇಮಕ ಮಾಡುವುದನ್ನು ಪಕ್ಷ, ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ. ಮಂಡ್ಯ ಜಿಲ್ಲೆಯ ರೈತರ ಬಗ್ಗೆ ಯಡಿಯೂರಪ್ಪ ಹೆಚ್ಚಿನ ಒಲವು ಹೊಂದಿದ್ದಾರೆ. ಆದಷ್ಟು ಬೇಗ ಮೈಶುಗರ್ಸ್ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಚಿಂತನೆಯಲ್ಲಿದ್ದಾರೆ. ಶೀಘ್ರದಲ್ಲೇ ಪಿಎಸ್‌ಎಸ್‌ಕೆ ಮಾದರಿಯಲ್ಲೇ ಮೈಶುಗರ್ಸ್ ಪು‌ನರಾರಂಭವಾಗಲಿದೆ. ಇದೇ ರೀತಿ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆಯೂ ಕೂಡ ಪು‌ನರ್ ಆರಂಭವಾಗಲಿದೆ’ ಎಂದು ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.