ADVERTISEMENT

ಒಂದೇ ದಿನ ಎರಡು ಪರೀಕ್ಷೆ: ಗೊಂದಲ

​ಪ್ರಜಾವಾಣಿ ವಾರ್ತೆ
Published 19 ಮೇ 2019, 11:29 IST
Last Updated 19 ಮೇ 2019, 11:29 IST

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌, ಕಿರಿಯ ಎಂಜಿನಿಯರ್‌(ಸಿವಿಲ್‌) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬಿ.ಇ. ಕೋರ್ಸ್‌ನ ಪರೀಕ್ಷೆಯನ್ನು ಒಂದೇ ದಿನ ನಿಗದಿಪಡಿಸಲಾಗಿದೆ. ಇದರಿಂದಾಗಿ ‘ಯಾವ ಪರೀಕ್ಷೆಗೆ ಹಾಜರಾಗಬೇಕು’ ಎಂದು ವಿದ್ಯಾರ್ಥಿಗಳು ಗೊಂದಲದಲ್ಲಿ ಮುಳುಗಿದ್ದಾರೆ.

ಕಿರಿಯ ಎಂಜಿನಿಯರ್‌ ಹುದ್ದೆಗೆ ಡಿಪ್ಲೊಮಾ(ಸಿವಿಲ್‌) ಕೋರ್ಸ್‌ ಅನ್ನು ಕನಿಷ್ಠ ವಿದ್ಯಾರ್ಹತೆಯಾಗಿ ನಿಗದಿ ಪಡಿಸಲಾಗಿದೆ. ಈ ಕೋರ್ಸ್‌ ಮುಗಿಸಿ ಬಿ.ಇ. ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಎಂಜಿನಿಯರ್‌ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

‘ಸರ್ಕಾರಿ ನೌಕರಿಯ ಪರೀಕ್ಷೆ ಹಾಗೂ ಕೋರ್ಸ್‌ನ ಪರೀಕ್ಷೆ ಎರಡನ್ನೂ ಜೂನ್‌ 10 ಮತ್ತು 12ರಂದು ನಿಗದಿಪಡಿಸಲಾಗಿದೆ. ಯಾವ ಪರೀಕ್ಷೆಗೆ ಓದಬೇಕು ಎಂಬ ಗೊಂದಲ ಮೂಡಿದೆ. ಆದ್ದರಿಂದ ನೇಮಕಾತಿ ಪರೀಕ್ಷೆಯನ್ನು ಜುಲೈ ತಿಂಗಳಿಗೆ ಮುಂದೂಡಿದರೆ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ’ ಎಂದು ಹುದ್ದೆಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಯೊಬ್ಬರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

ADVERTISEMENT

‘ಪರೀಕ್ಷಾ ದಿನಗಳ ಗೊಂದಲವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ ಸಚಿವರು, ಇಲಾಖೆ ಮುಖ್ಯ ಎಂಜಿನಿಯರ್‌ ಗಮನಕ್ಕೂ ತಂದಿದ್ದೇವೆ. ಅವರಿಂದ ಸ್ಪಂದನೆ ಬಂದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.