ADVERTISEMENT

ಹಳಿ ತಪ್ಪಿಸಿದ್ದೇ ಕಾಂಗ್ರೆಸ್‌: ಸಚಿವ ಬಸವರಾಜ ಬೊಮ್ಮಾಯಿ ವಾಗ್ದಾಳಿ

‘ಒಂದು ರಾಷ್ಟ್ರ ಒಂದು ಚುನಾವಣೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 20:41 IST
Last Updated 5 ಮಾರ್ಚ್ 2021, 20:41 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ದೇಶದಲ್ಲಿ 1967 ರವರೆಗೆ ಒಂದು ರಾಷ್ಟ್ರ ಒಂದು ಚುನಾವಣೆ ಪದ್ಧತಿ ಚಾಲ್ತಿಯಲ್ಲಿತ್ತು. ಕಾಂಗ್ರೆಸ್ ಪಕ್ಷವೇ ಅದನ್ನು ಹಳಿ ತಪ್ಪಿಸಿತು’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸಭೆಯಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ’ ವಿಷಯ ಪ್ರಸ್ತಾಪಿಸಿದ ಅವರು, ‘ಅಂದಿನ ರಾಷ್ಟ್ರಪತಿ ಮೂಲಕ 7 ರಾಜ್ಯಗಳ ಸರ್ಕಾರಗಳನ್ನು ಕೇಂದ್ರದಲ್ಲಿದ್ದ ಕಾಂಗ್ರೆಸ್‌ ಸರ್ಕಾರದ ನೇತಾರರು ವಿಸರ್ಜಿಸಿದರು. ರಾಷ್ಟ್ರಪತಿ ಆಡಳಿತವನ್ನು ಹೇರಿ, ದೇಶದ ದಾರಿ ತಪ್ಪಿಸಿದರು. ಇದರಿಂದಾಗಿ ಸಂಸತ್ ಮತ್ತು ವಿಧಾನಸಭೆಗಳಿಗೆ ಬೇರೆ ಬೇರೆ ಕಾಲದಲ್ಲಿ ಚುನಾವಣೆ ನಡೆಯಲು ಆರಂಭವಾಯಿತು’ ಎಂದು ಹೇಳಿದರು.

ಈ ಪದ್ಧತಿ ಮತ್ತೆ ಜಾರಿ ಬಂದರೆ ಚುನಾವಣೆಯಲ್ಲಿ ಅಕ್ರಮಕ್ಕೆ ಕಡಿವಾಣ ಹಾಕಬಹುದು. ಸಮಯ ಮತ್ತು ಹಣವನ್ನೂ ಉಳಿಸಬಹುದು. ಆದರೆ ಭ್ರಷ್ಟ ಮತ್ತು ಸ್ವಾರ್ಥಪರ ರಾಜಕಾರಣಿಗಳಿಗೆ ಈ ಪದ್ಧತಿ ಮತ್ತೆ ಬರುವುದು ಬೇಕಿಲ್ಲ ಎಂದು ಬೊಮ್ಮಾಯಿ ಕಿಡಿ ಕಾರಿದರು.

ADVERTISEMENT

ಇದೇ ಕಾಂಗ್ರೆಸ್‌ನವರು ತುರ್ತುಪರಿಸ್ಥಿತಿ ಹೇರಿ ದೇಶದ ಜನರ ಎಲ್ಲ ಹಕ್ಕುಗಳನ್ನೂ ಮೊಟಕುಗೊಳಿಸಿದರು. ಮಾಧ್ಯಮ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದ್ದರು. ಇಂತಹ ಸ್ಥಿತಿಯ ವಿರುದ್ಧ ಹೋರಾಡಿ ಪ್ರಜಾತಂತ್ರವನ್ನು ಉಳಿಸಿಕೊಂಡಿದ್ದು, ಈ ದೇಶದ ಜನರು. ಕಾಂಗ್ರೆಸ್‌ ತನ್ನ ಅಧಿಕಾರ ಉಳಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಸಿತ್ತು ಎಂದು ಅವರು ಹೇಳಿದರು.

ದೇಶದಲ್ಲಿ ಸಮ್ಮಿಶ್ರ ಸರ್ಕಾರದ ಯುಗ ಆರಂಭವಾಯಿತು. ಆ ಬಳಿಗೆ ಪ್ರತಿ ತಿಂಗಳು ಒಂದಲ್ಲ ಒಂದು ಚುನಾ
ವಣೆ ನಡೆಯುವ ಪರಿಪಾಟ ಆರಂಭವಾಯಿತು. ಇದು ದೇಶದ ಅಭಿವೃದ್ಧಿಗೆ ಅಡ್ಡಿ ಆಗಿದೆ ಎಂದು ಹೇಳಿದರು.

ಪ್ರಗತಿ ಬಯಸದ ಕಾಂಗ್ರೆಸ್‌ನಿಂದ ವಿರೋಧ

ಪ್ರತಿ ಚುನಾವಣೆ ಬಂದಾಗ ಅಧಿಕಾರಿಗಳು ಕನಿಷ್ಠ ಮೂರು ತಿಂಗಳು ಅದರಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದರಿಂದ ಎಲ್ಲ ಅಭಿವೃದ್ಧಿ ಕಾರ್ಯಗಳು ನಿಂತು ಹೋಗುತ್ತವೆ. ಪ್ರಗತಿಯ ಚಕ್ರಕ್ಕೆ ಪದೇ ಪದೇ ಬರುವ ಚುನಾವಣೆಗಳು ಅಡ್ಡಿ ಆಗಿವೆ ಎಂದು ಬಿಜೆಪಿಯ ಪಿ.ರಾಜೀವ್‌ ಹೇಳಿದರು.

ಚುನಾವಣೆಗಳು ಪ್ರಗತಿಗೆ ಮಾರಕವಾಗಬಾರದು. ದೇಶದ ಉಜ್ವಲ ಭವಿಷ್ಯದ ದೃಷ್ಟಿಯಿಂದ ಒಂದು ರಾಷ್ಟ್ರ ಒಂದು ಚುನಾವಣೆ ಪದ್ಧತಿ ಜಾರಿ ಮಾಡಬೇಕು. ಅಭಿವೃದ್ಧಿ ಬಯಸದ ಕಾಂಗ್ರೆಸ್‌ ಪಕ್ಷ ಇದನ್ನು ವಿರೋಧಿಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.