ADVERTISEMENT

ಕೇರಳ ಗಡಿಯಲ್ಲಿ 1 ವರ್ಷ ಕಣ್ಗಾವಲು: ಎಡಿಜಿಪಿ ಅಲೋಕ್ ಕುಮಾರ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 21:15 IST
Last Updated 4 ಆಗಸ್ಟ್ 2022, 21:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸುಳ್ಯ/ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕೇರಳ ಗಡಿಭಾಗದಲ್ಲಿ 12 ಹಾಗೂ ಮಂಗಳೂರು ನಗರ ವ್ಯಾಪ್ತಿಯಲ್ಲಿ 6 ಚೆಕ್‌ಪೋಸ್ಟ್‌ ಆರಂಭಿಸಿ, ಕೆಎಸ್‌ಆರ್‌ಪಿ ಪಡೆ ನಿಯೋಜಿಸಲಾಗಿದೆ.

ಗಡಿ ಭಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಹತ್ಯೆ ಆರೋಪಿಗಳೆಲ್ಲರೂ ಸೆರೆ ಸಿಕ್ಕ ನಂತರವೂ ಈ ವ್ಯವಸ್ಥೆ ಕನಿಷ್ಠ ಒಂದು ವರ್ಷ ಮುಂದುವರಿಯಲಿದೆ’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.

ಗುರುವಾರ ಬೆಳ್ಳಾರೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಪ್ರವೀಣ್ ಹತ್ಯೆ ಪ್ರಕರಣದ ತನಿಖೆ ಪ್ರಗತಿಯ ಮಾಹಿತಿ ಪಡೆದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ADVERTISEMENT

‘ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಯಾರು ಶಾಮೀಲಾಗಿದ್ದಾರೆ, ಸಂಚು ರೂಪಿಸಿದವರು ಯಾರು ಎಂಬ ಮಾಹಿತಿ ಲಭ್ಯವಾಗಿದೆ. ಎನ್ಐಎ ಅಧಿಕಾರಿಗಳ ಜೊತೆಯೂ ನಾವು ಸಂಪರ್ಕದಲ್ಲಿದ್ದೇವೆ. ಪ್ರಮುಖ ಆರೋಪಿಯನ್ನು ನಾವೇ ಬಂಧಿಸುತ್ತೇವೆ’ ಎಂದರು.

‘ಜಿಲ್ಲೆಯಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದೆ. ಕಿಡಿಗೇಡಿಗಳ ಮೇಲೆ ಕಣ್ಗಾವಲು ಇಡಲಾಗಿದೆ. ಕ್ರಿಮಿನಲ್‌ಗಳನ್ನು ಕ್ರಿಮಿನಲ್‌ಗಳನ್ನಾಗಿಯೇ ಉಪಚರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಬಂಧ ಸಡಿಲ (ಮಂಗಳೂರು ವರದಿ): ಮೂರು ಹತ್ಯೆಗಳ ಕಾರಣಕ್ಕಾಗಿ ಮೂಡಿದ್ದ ಆತಂಕದ ವಾತಾವರಣವನ್ನು ನಿವಾರಿಸಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಈಗ ಭಾಗಶಃ ಸಡಿಸಲಿಸಲಾಗಿದೆ.

ಸಂಜೆ 6ರಿಂದ ಬೆಳಿಗ್ಗೆ 6ರ ವರೆಗಿನ ನಿರ್ಬಂಧ ಸಡಿಲಗೊಳಿಸಿ, ಆ.5ರಿಂದ ಮುಂದಿನ ಮೂರು ದಿನಗಳವರೆಗೆ ರಾತ್ರಿ 9 ಗಂಟೆಯವರೆಗೆ ಅಂಗಡಿ, ಮಾಲ್‌ಗಳನ್ನು ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದೆ. ಆ.5ರಿಂದ ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದು, ಸಂಜೆ 6 ಗಂಟೆಯೊಳಗೆ ಮುಚ್ಚಬೇಕು ಎಂದು ಸೂಚಿಸಿದೆ.

ಸಿಆರ್‌ಪಿಸಿ 144 ಸೆಕ್ಷನ್ ಅಡಿಯಲ್ಲಿ ಉಳಿದ ನಿರ್ಬಂಧಗಳು ಈಗಿನಂತೆ ಜಾರಿಯಲ್ಲಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ತಿಳಿಸಿದ್ದಾರೆ.

ಅರ್ಧಗಂಟೆಯಲ್ಲೇ ಆದೇಶ ವಾಪಸ್‌

ಮಂಗಳೂರು ನಗರದಲ್ಲಿ ಆ.5ರಿಂದ ಮೂರು ದಿನ ಸಂಜೆ 6ರಿಂದ ಬೆಳಿಗ್ಗೆ 6 ಗಂಟೆಯವರೆಗೆ ದ್ವಿಚಕ್ರ ವಾಹನಗಳಲ್ಲಿ 18 ವರ್ಷ ಮೇಲಿನ ಪುರುಷ ಸಹ ಸವಾರರ ಸಂಚಾರವನ್ನು ನಿರ್ಬಂಧಿಸಿ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಗುರುವಾರ ಸಂಜೆ ಆದೇಶ ಹೊರಡಿಸಿದ್ದರು. ಅರ್ಧ ಗಂಟೆಯಲ್ಲೇ ಆದೇಶವನ್ನು ವಾಪಸ್ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.